ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಎರಡು ತಿಂಗಳ ಪುಟ್ಟ ಮಗುವನ್ನು ಕೊಂದ ವ್ಯಕ್ತಿ!
ನ್ಯೂಸ್ ಕನ್ನಡ ವರದಿ-(22.04.18): ಅಮಾನವೀಯತೆಯು ತಾಂಡವವಾಡುತ್ತಿರುವ ಈಗಿನ ಕಾಲದಲ್ಲಿ ಕರುಣೆಯೆಂಬುವುದು ಮರೀಚಿಕೆಯಾಗಿದೆ. ನಿನ್ನೆ ತಾನೇ ಆರು ತಿಂಗಳ ಪುಟ್ಟ ಮಗುವೊಂದನ್ನು ಅತ್ಯಾಚಾರ ಮಾಡಿ ಕೊಲೆಗೈದ ಭೀಭತ್ಸ ಪ್ರಕರಣವು ವರದಿಯಾಗಿತ್ತು. ಇದೀಗ ಪತ್ನಿಯು ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ವ್ಯಕ್ತಿಯೋರ್ವ ತನ್ನ 2 ತಿಂಗಳ ಪುಟ್ಟ ಮಗುವನ್ನು ಕೊಂದ ಘಟನೆಯು ದೆಹಲಿಯ ಮಂಗೋಲ್ ಪುರಿ ಎಂಬಲ್ಲಿ ನಡೆದಿದೆ.
ಇಬ್ಬರು ಅಪ್ರಾಪ್ತರು 10 ತಿಂಗಳ ಹಿಂದೆ ಮದುವೆಯಾಗಿದ್ದರು, ಅವರಿಗೆ 2 ತಿಂಗಳ ಮಗುವೂ ಇತ್ತು. ನಿನ್ನೆ ಮಗುವನ್ನು ಗಂಡನ ಬಳಿ ಮನೆಯಲ್ಲಿಯೇ ಬಿಟ್ಟು ಪತ್ನಿ ಕೆಲಸ ಹುಡುಕಲು ಹೋಗಿದ್ದಳು. ಪಾಲಿಕ ಬಜಾರ್ನಲ್ಲಿ ಸೇಲ್ಸ್ಗರ್ಲ್ ಕೆಲಸಕ್ಕಾಗಿ ಹುಡುಕಾಡಿ ಸಂಜೆ ವೇಳೆಗೆ ಮನೆಗೆ ಹಿಂತಿರುಗಿದಾಗ ನಿಶ್ಚಲವಾಗಿ ಬಿದ್ದಿದ್ದ ಮಗುವನ್ನು ನೋಡಿ ಗಾಬರಿಗೊಂಡಿದ್ದಾಳೆ. ಪತಿ ಸಹ ಮನೆಯಲ್ಲಿ ಕಾಣಿಸಿಲ್ಲ. ಕೂಡಲೇ ಮಗುವನ್ನು ತಾಯಿ ಆಸ್ಪತ್ರೆಗೆ ಕೊರೆದೊಯ್ದಿದ್ದಾಳೆ. ಪರಿಶೀಲಿಸಿದ ವೈದ್ಯರು ಮಗು ಮೃತಪಟ್ಟಿರುವುದ್ದನ್ನು ದೃಢಪಡಿಸಿದ್ದಾರೆ. ನೊಂದ ತಾಯಿ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು 17 ವರ್ಷದ ಆರೋಪಿ ಪತಿಯನ್ನು ಬಂಧಿಸಿದ್ದಾರೆ.