ಡಕ್ವರ್ತ್ ಲೂಯಿಸ್ ನಿಯಮ ಯಾವ ಆಧಾರದಿಂದ ಕೂಡಿದೆ ಎನ್ನುವುದೇ ಅರ್ಥವಾಗುವುದಿಲ್ಲ: ದಿನೇಶ್ ಕಾರ್ತಿಕ್
ನ್ಯೂಸ್ ಕನ್ನಡ ವರದಿ-(22.04.18): ನಿನ್ನೆ ತಾನೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಐಪಿಎಲ್ ಪಂದ್ಯವು ನಡೆದಿತ್ತು. ಪಂಜಾಬ್ ನ ಕ್ರಿಸ್ ಗೈಲ್ ಮತ್ತು ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಪಂಜಾಬ್ ತಂಡವನ್ನು ಗೆಲ್ಲಿಸಿದ್ದರು. ಈ ಪಂದ್ಯವು ಅರ್ಧದಲ್ಲಿ ಮಳೆಯ ಕಾರಣದಿಂದ ಮೊಟಕುಗೊಂಡಿತ್ತು. ಬಳಿಕ ಪುನರಾರಂಭಗೊಂಡ ಪಂದ್ಯದಲ್ಲಿ ಪಂಜಾಬ್ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸುಲಭ ಗುರಿಯನ್ನು ಪಡೆದುಕೊಂಡು ಗೆಲುವು ಸಾಧಿಸಿತ್ತು. ಇದೀಗ ಡಕ್ವರ್ತ್ ಲೂಯಿಸ್ ನಿಯಮದ ಕುರಿತು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಕ್ವರ್ತ್ ಲೂಯಿಸ್ ನಿಯಮವು ನಿಜಕ್ಕೂ ಗೊಂದಲಕಾರಿಯಾಗಿದೆ, ವಿದೇಶಿಯರು ಕಂಡು ಹಿಡಿದ ಈ ಡಕ್ವರ್ತ್ ಲೂಯಿಸ್ ನಿಯಮವನ್ನು ಬಳಸುವ ಬದಲು ಭಾರತೀಯರೇ ಕಂಡು ಹಿಡಿದಿರುವ ಸುಲಭ ಹಾಗೂ ನ್ಯಾಯ ಸಮ್ಮತವಾಗಿರುವ ಜಯದೇವನ್(ವಿಜೆಡಿ) ಪದ್ಧತಿಯನ್ನೇಕೆ ಅಳವಡಿಸಬಾರದು ಎಂದು ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ. ಡಕ್ವರ್ತ್ ಲೂಯಿಸ್ ನಿಯಮ ಯಾವ ಆಧಾರದಿಂದ ಕೂಡಿದೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.