ಪ್ರವೀಣ್ ತೊಗಾಡಿಯಾ ಶಿವಸೇನೆ ಪರ ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ: ಮುತಾಲಿಕ್
ನ್ಯೂಸ್ ಕನ್ನಡ ವರದಿ-(22.04.18): ಬಿಜೆಪಿ ಪಕ್ಷವು ಹಿಂದುತ್ವ ಹೋರಾಟಗಾರ ಪ್ರವೀಣ್ ಭಾಯಿ ತೊಗಾಡಿಯಾರನ್ನು ಮೂಲೆಗುಂಪು ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ. ಇದೀಗ ಶಿವಸೇನೆ ಅಭ್ಯರ್ಥಿಗಳ ಪರ ರಾಜ್ಯಕ್ಕೆ ಪ್ರವೀಣಭಾಯಿ ತೊಗಡಿಯಾ ಬರಲಿದ್ದು ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಶಿವಸೇನೆ ಅಭ್ಯರ್ಥಿಗಳ 36 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಭಾನುವಾರ ಸಂಜೆಯೊಳಗೆ ತಾವು ಸ್ಪರ್ಧಿಸುವ ಕ್ಷೇತ್ರವನ್ನು ಅಂತಿಮ ಗೊಳಿಸುವುದಾಗಿ ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಭ್ಯರ್ಥಿಗಳ ಆಸ್ತಿ ಘೋಷಣೆ ನೋಡಿದರೆ ಅವರ ಆಸ್ತಿಗಳು ಹೇಗೆ ಬೆಳೆಯುತ್ತಾ ಇವೆ ಅಂತಾ ಗೊತ್ತಾಗುತ್ತೆ. ಬಡವರು, ನೇಕಾರರು, ರೈತರು, ಕೂಲಿಕಾರರು ಎಲ್ಲಿದ್ದಾರೋ ಅಲ್ಲೇ ಇದ್ದಾರೆ. ಆದರೆ ಈ ರಾಜಕೀಯ ನೀಚರು ಮಾತ್ರ ಬಂಗಲೆ ಮೇಲೆ ಬಂಗಲೆ ಕಟ್ಟುತ್ತಿದ್ದಾರೆ. ಹೀಗಾಗಿ ಇವರೆಲ್ಲರನ್ನೂ ತಿರಸ್ಕಾರ ಮಾಡಿ ಎಂದರು.