‘ನೀ ದೊಡ್ಡ ಲೀಡರಾ? ತಿನ್ನ ತಲೆ ಕತ್ತರಿಸುತ್ತೇನೆ’ ಎಂದು ಸಚಿವ ಅನಂತ್ ಹೆಗಡೆಗೆ ಕೊಲೆ ಬೆದರಿಕೆ! ದೂರು ದಾಖಲು
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ವಾಕ್ಸಮರದ, ಟೀಕೆ ಟಿಪ್ಪಣಿ ಕಂಡುಬರುತ್ತಿದೆ ಆದರೆ ಇದೀಗ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರಿಗೆ ಇಂಟರ್ ನೆಟ್ ಮೂಲಕ ಕೊಲೆ ಬೆದರಿಕೆ ಕರೆ ಬಂದಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರ ಮೊಬೈಲ್ ನಂಬರ್ ಹಾಗೂ ಲ್ಯಾಂಡ್ ಲೈನ್ ನಂಬರಿಗೆ ಮೂರು ಬಾರಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ. ಇಂದು ಬೆಳಗಿನ ಜಾವ ಶಿರಸಿಯ ಮನೆಯಲ್ಲಿ ಇರುವಾಗ ಬೆದರಿಕೆ ಹಾಕಲಾಗಿದ್ದು, ಮೊದಲು +04044 ನಂಬರಿನಿಂದ ಸಚಿವರ ಮೊಬೈಲ್ ಗೆ ಕರೆ ಮಾಡಲಾಗಿದೆ. ಆದರೆ ಈ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮತ್ತೆ 0040440000 ನಂಬರಿನಿಂದ ಕರೆ ಮಾಡಲಾಗಿದೆ.
ಈ ವೇಳೆ ಕರೆಯನ್ನು ಸಚಿವರ ಪತ್ನಿ ಕರೆ ಸ್ವೀಕರಿಸಿದ್ದರು. ಇದಾದ ನಂತರ ಮತ್ತೆ ಬೆಳಗಿನ ಜಾವ 2 ಘಂಟೆಗೆ ಕರೆ ಮಾಡಿದ್ದು, ಸಚಿವರೇ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಕರೆ ಮಾಡಿದ ದುಷ್ಕರ್ಮಿಗಳು ಸಚಿವರಿಗೆ ಬೆದರಿಕೆ ಹಾಕಿದ್ದು, ನೀನು ದೊಡ್ಡ ಲೀಡರಾ? ನಿನ್ನ ತಲೆ ಕಡಿದು ಹಾಕುತ್ತೇನೆ, ದೇಹವನ್ನ ತುಂಡು ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಶಟ್ಟಿ ಇಂದು ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 504 ಹಾಗೂ 507 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾಹಿತಿ ಕೃಪೆ ಪಬ್ಲಿಕ್ ಟಿವಿ ಕನ್ನಡ ನ್ಯೂಸ್