ನಾವೆಲ್ಲ ಒಗ್ಗಟ್ಟಾಗಿದ್ದೇವೆ, ಕಾಂಗ್ರೆಸ್ ಗೆಲುವೇ ನಮ್ಮೆಲ್ಲರ ಗುರಿ!: ಮಲ್ಲಿಕಾರ್ಜುನ ಖರ್ಗೆ
ನ್ಯೂಸ್ ಕನ್ನಡ ವರದಿ: ಸದ್ಯಕ್ಕೆ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ನಮ್ಮ ಗುರಿ. ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯೋ ಅಲ್ಲವೋ ಎಂಬುದು ಚರ್ಚೆಯ ವಿಷಯವಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನೀವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದರು.
ಅದು ಈಗಿನ ಪ್ರಶ್ನೆ ಅಲ್ಲ. ಹೈಕಮಾಂಡ್ ಬಯಸಿದರೆ ನೂರು ಜನರನ್ನು ಬೇಕಾದರೂ ಕಳುಹಿಸುತ್ತದೆ. ಬೇಡ ಎಂದರೆ ವಾಪಸ್ ಕರೆಸಿಕೊಳ್ಳುತ್ತದೆ. ಹಾಗಾಗಿ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಅನಗತ್ಯ. ಮುಂಬರುವ ಚುನಾವಣೆ ಸೈದ್ಧಾಂತಿಕ ಹೋರಾಟವಾಗಿದೆ. ಕಾಂಗ್ರೆಸ್ನ ಸಿದ್ಧಾಂತ ಮತ್ತು ಬಿಜೆಪಿ ಸಿದ್ಧಾಂತಗಳ ನಡುವಿನ ಸಂಘರ್ಷ. ಇದು ವೈಯಕ್ತಿಕ ಹೋರಾಟ ಅಲ್ಲ. ಸೈದ್ಧಾಂತಿಕ ಹೋರಾಟ. ಬಿಜೆಪಿಯವರು ಅಭಿವೃದ್ದಿ ವಿಷಯದಲ್ಲಿ ಮಾತನಾಡುತ್ತಿಲ್ಲ. ತಾಲೂಕುಮಟ್ಟದಲ್ಲಿ ದ್ವೇಷಿಯ ಭಾವನೆ ಹೆಚ್ಚಿಸುವಂತಹ ಮಾತುಗಳನ್ನಾಡಲು ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ಭಾಗಗಳಿಂದ ಕಾರ್ಯಕರ್ತರನ್ನು ಕರೆಸಿಕೊಳ್ಳುತ್ತಿದ್ದಾರೆ. ಖುದ್ದು ಪ್ರಧಾನಿಯವರೇ ಬಂದು ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸಚಿವರು ಆಗಮಿಸುತ್ತಿದ್ದಾರೆ. ಪ್ರಧಾನಿಯವರು ಲೋಕಸಭೆ ಚುನಾವಣೆ ವೇಳೆ ತಾವು ನೀಡಿದ್ದ ಭರವಸೆಗಳನ್ನು ಈಡೇರಿಸಿರುವ ಬಗ್ಗೆ ವಿವರಣೆ ನೀಡಿ ಮತ ಕೇಳಲಿ ಎಂದು ಖರ್ಗೆ ಸವಾಲು ಹಾಕಿದರು.
ಕಪ್ಪು ಹಣವನ್ನು ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮಾ ಮಾಡುವುದಾಗಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ವರ್ಷಕ್ಕೆ 15 ಲಕ್ಷದಂತೆ ನಾಲ್ಕು ವರ್ಷದಲ್ಲಿ 60 ಲಕ್ಷ ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ರೈತರ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನಿಗದಿ ಮಾಡುವುದಾಗಿ ಹೇಳಿದ್ದರು. ಅದರ ಬದಲಾಗಿ ಬೆಂಬಲ ಬೆಲೆ ಕಡಿಮೆ ಮಾಡಲಾಗುತ್ತಿದೆ. ಪರಿಶಿಷ್ಟ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಇಡೀ ದೇಶಕ್ಕೆ 54 ಸಾವಿರ ಕೋಟಿ ಮಾತ್ರ ಕೊಟ್ಟಿದೆ. ಕರ್ನಾಟಕ ಸರ್ಕಾರ ಒಂದೇ ರಾಜ್ಯದ ದಲಿತರಿಗೆ 27.05 ಕೋಟಿ ರೂ. ಹಣ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಜನಪರ ಯೋಜನೆಗಳನ್ನು ಎದುರಿಸಲಾಗದೆ ದ್ವೇಷಿಯ ಭಾವನೆ ಬಿತ್ತುವಂತಹ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಈ ನಡುವೆ ಮುಖ್ಯಮಂತ್ರಿ ಹುದ್ದೆಯ ಪ್ರಶ್ನೆಯನ್ನೂ ಮುಂದಿಟ್ಟು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇದ್ಯಾವುದೂ ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ನಾವು ಮಠಿತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಹೇಳಿದರು.