ನಮ್ಮ ತಪ್ಪುಗಳು ಮಾಧ್ಯಮಗಳಿಗೆ ಮಸಾಲೆಯಾಗದಂತೆ ನೊಡಿಕೊಳ್ಳಿ: ಪ್ರಧಾನಿ ಮೋದಿ ತಾಕೀತು!
ನ್ಯೂಸ್ ಕನ್ನಡ ವರದಿ-(23.04.18): ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟುಮಾಡುತ್ತಿರುವ ಸದಸ್ಯರಿಗೆ ಪ್ರಧಾನಿ ಮೋದಿ ಅವರು ಎಚ್ಚರಿಕೆ ಸಂದೇಶ ರವಾನಿಸಿದ್ದು, ನಮ್ಮ ತಪ್ಪುಗಳು ಮಾಧ್ಯಮಗಳಿಗೆ ಮಸಾಲೆಯಾಗದಂತೆ ನೋಡಿಕೊಳ್ಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಭಾನುವಾರ ನರೇಂದ್ರ ಮೋದಿ ಆ್ಯಪ್ ಮೂಲಕ ಬಿಜೆಪಿ ಶಾಸಕರು, ಜನಪ್ರತಿನಿಧಿಗಳ ಜತೆ ಸಂವಾದ ನಡೆಸಿದ ಪ್ರಧಾನಿ, ವಿವಾದಾತ್ಮಕ ಹೇಳಿಕೆಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ. “ನಾವು ತಪ್ಪುಗಳನ್ನು ಮಾಡುವ ಮೂಲಕ ಮಾಧ್ಯಮಗಳಿಗೆ ಮಸಾಲೆಯನ್ನು ಒದಗಿಸುತ್ತಿದ್ದೇವೆ. ನಾವೇ ದೊಡ್ಡ ಸಾಮಾಜಿಕ ವಿಜ್ಞಾನಿಗಳಂತೆ, ತಜ್ಞರಂತೆ ಕೆಲವೊಂದು ವಿಚಾರಗಳನ್ನು ವಿಶ್ಲೇಷಿಸುತ್ತೇವೆ. ಕ್ಯಾಮೆರಾ ಕಂಡೊಡನೆ ಮಾತನಾಡಲು ಆರಂಭಿಸುತ್ತೇವೆ. ಹೀಗಾದಾಗಲೇ ಅರ್ಧ ಬೆಂದ ವಿಚಾರಗಳು ಹೊರಬರಲು ಆರಂಭವಾಗುತ್ತವೆ. ಹಾಗಾಗಿ, ಇಂಥದ್ದರಿಂದ ದೂರವಿರಿ’ ಎಂದು ಹೇಳಿದ್ದಾರೆ.