9 ವರ್ಷದ ಬಾಲಕಿಗೆ ರೈಲಿನಲ್ಲಿ ಲೈಂಗಿಕ ಕಿರುಕುಳ: ಮಾಜಿ ಬಿಜೆಪಿ ಅಭ್ಯರ್ಥಿಯ ಬಂಧನ!

ನ್ಯೂಸ್ ಕನ್ನಡ ವರದಿ-(23.04.18): ದೇಶದೆಲ್ಲೆಡೆ ಹಲವು ದಿನಗಳಿಂದ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ ತಮಿಳುನಾಡಿನಲ್ಲಿ ಪ್ರಕರಣವೊಂದು ನಡೆದಿದೆ. ಚಲಿಸುತ್ತಿದ್ದ ರೈಲಿನೊಳಗಡೆ 9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ಮಾಜಿ ಬಿಜೆಪಿ ಚುನಾವಣಾ ಅಭ್ಯರ್ಥಿ ಹಾಗೂ ಹೈಕೋರ್ಟ್ ವಕೀಲ ಕೆ.ಪಿ ಪ್ರೇಮ್ ಅನಂತ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ಪ್ರೇಮ್ ಅನಂತ್ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿ ಅನಂತ್ 2006ರಲ್ಲಿ ತಮಿಳುನಾಡಿನ ಆರ್‌.ಕೆ.ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಬಾಲಕಿ ಶನಿವಾರ ರಾತ್ರಿ ಕುಟುಂಬದವರ ಜತೆ ರೈಲಿನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದಳು. ಕೊಯಮತ್ತೂರು ಮತ್ತು ಈರೋಡ್‌ ನಡುವೆ ತಡರಾತ್ರಿ 1.15ಕ್ಕೆ ಕಿರುಕುಳ ನೀಡಲಾಗಿದೆ. ಆರೋಪಿ ಕೊಯಮತ್ತೂರಿನಲ್ಲಿ ರೈಲು ಹತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಯ ವಿರುದ್ಧ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ)’ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *