ಹ್ಯಾಂಡ್ ಬ್ರೇಕ್ ಸಡಿಲಿಸಿದ ಮಗು: ಟಾಟಾ ಸುಮೋ ಕಮರಿಗೆ ಬಿದ್ದು ಮಗು ಸಹಿತ 7 ಜನರ ಮೃತ್ಯು!
ನ್ಯೂಸ್ ಕನ್ನಡ ವರದಿ(23-04-2018): ಮದುವೆ ದಿಬ್ಬಣದ ಜೊತೆಗೆ ಸಾಗುತ್ತಿದ್ದ ಟಾಟಾ ಸುಮೋ ವಾಹನದ ಹ್ಯಾಂಡ್ ಬ್ರೇಕ್ ನ್ನು ಮಗು ಹಿಡಿದು ಎಳೆದ ಕಾರಣ ಹ್ಯಾಂಡ್ ಬ್ರೇಕ್ ಸಡಿಲಗೊಂಡು ರಸ್ತೆ ಬದಿಯಲ್ಲಿದ್ದ ಕಮರಿಗೆ ಬಿದ್ದು ಮಗು ಸಹಿತ ಏಳು ಮಂದಿ ದಾರುಣ ಸಾವಿಗೀಡಾದ ಘಟನೆ ಹೊಸದಿಲ್ಲಿಯ ಸಮೀಪ ನಡೆದಿದೆ.
ಉತ್ತರ ಪ್ರದೇಶದ ಬೆಹ್ರಾಂಪುರದಿಂದ ಖೋಡಾಗೆ 12 ಜನರಿದ್ದ ಟಾಟಾ ಸುಮೋ ಮದುವೆ ದಿಬ್ಬಣದೊಂದಿಗೆ ಸಾಗುತ್ತಿತ್ತು. ಮಾರ್ಗದ ಮಧ್ಯೆ ಚಾಲಕ ವಾಹನವನ್ನು ನಿಲ್ಲಿಸಿ ಕೆಳಗಿಳಿದಿದ್ದು, ವಾಹನದಲ್ಲಿದ್ದ ಮಗು ಹ್ಯಾಂಡ್ ಬ್ರೇಕ್ ಹಿಡಿದೆಳೆದ ಕಾರಣ ಅದು ಸಡಿಲಗೊಂಡು ಟಾಟಾ ಸುಮೋ ಕಮರಿಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಸಂಭ್ರಮದಿಂದ ಸಾಗುತ್ತಿದ್ದ ಮದುವೆ ದಿಬ್ಬಣವು ಸ್ಥಗಿತಗೊಂಡು ನೆರೆದಿದ್ದವರ ಮುಖದಲ್ಲಿ ದುಃಖದ ಚಾಯೆ ಮಡುಗಟ್ಟಿತು. ಈ ಅಪಘಾತ ಚಾಲಕನ ಅಚಾತುರ್ಯದಿಂದಲೋ ಅಥವಾ ವಾಹನದಲ್ಲಿದ್ದವರ ನಿರ್ಲಕ್ಷತೆಯಿಂದಲೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.