ಚುನಾವಣಾ ಕಣಕ್ಕಿಳಿದ ಹುಚ್ಚ ವೆಂಕಟ್: ಸ್ಪರ್ಧೆ ಯಾರ ವಿರುದ್ಧ ಗೊತ್ತೇ?
ನ್ಯೂಸ್ ಕನ್ನಡ ವರದಿ-(07.04.18): ಫೈರಿಂಗ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ಕನ್ನಡ ಚಿತ್ರನಟ, ನಿರ್ದೇಶಕ ಹುಚ್ಚ ವೆಂಕಟ್ ಹಲವು ಸಿನಿಮಾ ಮಾಡಿ ಕೈಸುಟ್ಟುಕೊಂಡು ಇದೀಗ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಆರೋಪಗಳನ್ನು ಮಾಡಿಕೊಂಡು ಬಂದಿರುವ ಹುಚ್ಚ ವೆಂಕಟ್ ಇದೀಗ ಮುನಿರತ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೆಂಕಟ್ ‘ಮುನಿರತ್ನ ಕ್ಷೇತ್ರದಲ್ಲಿ ಅಕ್ರಮಗಳನ್ನು ಮಾಡುತ್ತಿದ್ದು ಅವರ ವಿರುದ್ಧ ಪಕ್ಷೇತರನಾಗಿ ಕಣಕ್ಕಿಳಿಯುತ್ತೇನೆ’ ಎಂದಿದ್ದಾರೆ. ಎಂದಿನ ಶೈಲಿಯಲ್ಲಿ ಡೈಲಾಗ್ಗಳನ್ನು ಹೇಳಿದ ವೆಂಕಟ್ ‘ಮುಂದೆ ನಾನು ಪ್ರಧಾನಿ ಆಗಿ ಜನರನ್ನು ಬದಲಾವಣೆ ಮಾಡುತ್ತೇನೆ, ಆ ಬಳಿಕ ದೇಶ ಬದಲಾವಣೆ ಮಾಡುತ್ತೇನೆ’ ಎಂದರು. ನಾನು ಮಾಡಿದಂತೆ ಚುನಾವಣಾ ಪ್ರಚಾರ ಯಾರಿಗೂ ಮಾಡಲು ಸಾಧ್ಯವಿಲ್ಲ. ಮೋದಿ, ಒಬಾಮಾ ರಿಂದಲೂ ನನ್ನ ರೀತಿ ಪ್ರಚಾರ ಮಾಡುವುದು ಅಸಾಧ್ಯ’ ಎಂದರು. ಮುನಿರತ್ನ ನನಗೆ ಲಂಚಕೊಟ್ಟು ನನ್ನ ಜೊತೆ ಸೇರಿಕೊ ಎಂದು ಆಫರ್ ನೀಡಿದ್ದರು’ ಎಂದು ವೆಂಕಟ್ ಆರೋಪಿಸಿದ್ದಾರೆ.