ಹಾಡುಹಗಲೇ ನಡುರಸ್ತೆಯಲ್ಲೇ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಟ್ವೀಟ್ ಮಾಡಿದ ರೂಪದರ್ಶಿ!

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಹಲವಾರು ಆಘಾತಕಾರಿ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯ ಪ್ರಕರಣಗಳು ಜನಸಾಮಾನ್ಯರಲ್ಲಿ ಆಕ್ರೋಶ ಉಂಟುಮಾಡಿದ್ದು, ಅದರ ನಡುವೆಯೇ ನಾಗರಿಕರು ನಾಚಿಕೆಯಿಂದ ತಲೆತಗ್ಗಿಸುವಂಥ ಮತ್ತೊಂದು ಹೀನಾಯ ಘಟನೆ ಇಂದೋರ್‍ನಲ್ಲಿ ಭಾನುವಾರ ನಡೆದಿದೆ.

ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ರೂಪದರ್ಶಿಯ ಮಿನಿ ಸ್ಕರ್ಟ್ ಅನ್ನು ಎಳೆದು ಲೈಂಗಿಕ ದೌರ್ಜನ್ಯ ಎಸಗಲು ಇಬ್ಬರು ದುರುಳರು ಯತ್ನಿಸಿದ್ದು, ಆಗ ನಡೆದ ಜಟಾಪಟಿಯಲ್ಲಿ ರೂಪದರ್ಶಿಯ ವಾಹನ ಅಪಘಾತಕ್ಕೀಡಾಗಿ ಅವರಿಗೆ ಗಾಯವಾಗಿದೆ. ನಾಚಿಕೆಗೇಡಿನ ಸಂಗತಿಯೆಂದರೆ, ಹಾಡಹಗಲೇ ಎಲ್ಲರೆದುರಿನಲ್ಲಿ ಈ ಘಟನೆ ನಡೆಯುತ್ತಿದ್ದರೆ ಯಾರೂ ಆ ರೂಪದರ್ಶಿಯ ಸಹಾಯಕ್ಕೆ ಬಂದಿಲ್ಲ. ಗಾಯದ ಮೇಲೆ ಉಪ್ಪು ಸುರಿದಂತೆ, ರೂಪದರ್ಶಿಯನ್ನು ಮೇಲೆತ್ತಲು ಬಂದ ಇಬ್ಬರು ಹಿರಿಯರು, ನೀನಿಂಥ ಸ್ಕರ್ಟ್ ತೊಟ್ಟಿದ್ದರಿಂದಲೇ ಆ ದುರುಳರು ಹೀಗೆ ಮಾಡಿದ್ದು ಎಂದು ವ್ಯಂಗ್ಯವಾಡಿದ್ದಾರೆ.

https://twitter.com/SharmaAakarshi/status/988160062278352896?s=19

ಅತ್ಯಂತ ಜನನಿಬಿಡವಾದ ಪ್ರದೇಶದಲ್ಲಿ ರೂಪದರ್ಶಿಯ ಸ್ಕರ್ಟ್ ಎಳೆಯಲು ಆ ವ್ಯಕ್ತಿಗಳು ಯತ್ನಿಸಿದ್ದು ಮಾತ್ರವಲ್ಲ, “ಇದರ ಕೆಳಗೆ ಏನಿದೆ ನೋಡು” ಎಂಬಂತಹ ಅಸಹ್ಯಕರ ಮಾತುಗಳನ್ನು ಕೂಡ ಆಡಿ ನಕ್ಕಿದ್ದಾರೆ. ಆ ವ್ಯಕ್ತಿಗಳು ಕೂಡಲೆ ಅಲ್ಲಿಂದ ಪರಾರಿಯಾಗಿದ್ದಾರೆ. ತನ್ನ ಕಥನವನ್ನು ಆಕ್ರೋಶಭರಿತ ನುಡಿಗಳಲ್ಲಿ ತೆರೆದಿಟ್ಟಿರುವ ರೂಪದರ್ಶಿ, ಇನ್‌ಸ್ಟಾಗ್ರಾಮ್ ನಲ್ಲಿ ಲೈವ್ ಬಂದು ಇಡೀ ಘಟನೆಯನ್ನು ವಿವರಿಸಿದ್ದಾರೆ. ಟ್ವಿಟ್ಟರ್ ನಲ್ಲಿಯೂ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿವರಗಳನ್ನು ನೀಡಿ, ತನ್ನ ಸಹಾಯಕ್ಕೆ ಬರದವರ ಮೇಲೆ ಛೀಮಾರಿ ಹಾಕಿದ್ದಾರೆ.

ಆ ಇಬ್ಬರು ಕೂಡಲೆ ಅಲ್ಲಿಂದ ಪಾರಾಗಿದ್ದರಿಂದ ಅವರನ್ನು ಆಕೆ ಬೆನ್ನತ್ತಿದರೂ ಹಿಡಿಯಲು ಸಾಧ್ಯವಾಗಿಲ್ಲ. ಅಲ್ಲದೆ, ಅವರ ವಾಹನದ ನಂಬರ್ ಗುರುತು ಹಿಡಿಯಲೂ ಅವರಿಗೆ ಆಗಿಲ್ಲ. ಕೆಲ ಹೊತ್ತಿನ ನಂತರ ಅದೇ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲದಿರುವುದು ಕಂಡುಬಂದಿದೆ.ಹಿರಿಯರು ಆಡಿರುವ ನುಡಿಗಳ ಬಗ್ಗೆ ನೊಂದು, “ನಾನೇನು ಧರಿಸಬೇಕು ಅದು ನನ್ನ ಆಯ್ಕೆ. ಆದರೆ ನಾನು ಮಿನಿ ಸ್ಕರ್ಟ್ ಹಾಕಿದ್ದೀನಂತ ನನ್ನ ಮೇಲೆ ದೌರ್ಜನ್ಯ ಎಸಗಲು ಮತ್ತು ಅಹಸ್ಯಕರವಾಗಿ ವರ್ತಿಸಲು ಯಾರಿಗೂ ಹಕ್ಕಿಲ್ಲ. ಆ ಹಿರಿಯರು ಹಾಗೆ ಹೇಳಿದ್ದು ಕೇಳಿ ನನಗೆ ತುಂಬಾ ಬೇಜಾರಾಯಿತು” ಎಂದು ಕಂಬನಿ ಮಿಡಿದಿದ್ದಾರೆ.

ರೂಪದರ್ಶಿಗೆ ಸಾಮಾಜಿಕ ತಾಣದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ದಯವಿಟ್ಟು ಯಾರೂ ನನಗೆ ಕರೆ ಮಾಡಬೇಡಿ, ನನ್ನ ಹೆಸರು ನಮೂದಿಸಬೇಡಿ. ನಾನು ಈ ವಿಷಯ ಇಲ್ಲಿ ವಿವರಿಸಿದ್ದು ಇಂಥ ಘಟನೆ ಮತ್ತೆ ನಡೆಯಬಾರದು ಎಂದು ಮಾತ್ರ ಎಂದು ಆ ರೂಪದರ್ಶಿ ಬೇಡಿಕೊಂಡಿದ್ದಾರೆ.

ಮಾಹಿತಿ ಕೃಪೆ ಓನ್ ಇಂಡಿಯಾ & ಟ್ವಿಟರ್

Leave a Reply

Your email address will not be published. Required fields are marked *