ವಿಜಯೇಂದ್ರ ಸ್ಪರ್ಧಿಸಿದರೆ ಸಿಎಂ ಮಗನ ಸೋಲು ನಿಶ್ಚಿತ, ಅವರಿಗೇ ಟಿಕೆಟ್ ನೀಡಬೇಕು!: ಪ್ರತಾಪ್ ಸಿಂಹ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಇಂದು ರಾಜ್ಯ ರಾಜಕಾರಣದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ. ಬೇರೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದ ಎಂದು ಸ್ವತಹ ಯಡಿಯೂರಪ್ಪವರೇ ಸ್ಪಷ್ಟ ಪಡಿಸಿದ್ದಾರೆ.

ವರುಣಾ ಕ್ಷೇತ್ರ ಟಿಕೆಟ್ ಹಂಚಿಕೆ ಬಿಜೆಪಿ ನಾಯಕರಲ್ಲಿ ಗೊಂದಲವನ್ನು ಉಂಟು ಮಾಡಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಅನಿವಾರ್ಯ ಎಂದು ಹೇಳಿದ್ದಾರೆ. ಮೈಸೂರಿನ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಅನಿವಾರ್ಯ ಸುದ್ದಿಗೋಷ್ಠಿಯಾಗಿದ್ದು ಮೈಸೂರು ಹಾಗೂ ಚಾಮರಾಜನಗರದ 15 ಮಂದಿ ಬಿಜೆಪಿ ಮುಖಂಡರ ಭವಿಷ್ಯಕ್ಕೆ ಕುತ್ತು ಬಂದಿದೆ. ನಾನು ಹೈಕಮಾಂಡ್‍ಗೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ನಾವು ಈಗಾಗಲೇ ಜಾವಡೇಕರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದೇವೆ. ರಾಜ್ಯಾಧ್ಯಕ್ಷ ಬಿಎಸ್‍ವೈ ಅವರನ್ನು ಒತ್ತಾಯಿಸಿದ್ದೇವೆ. ಅವರು ಕಾರ್ಯಕರ್ತರ ಮನವಿಗೆ ಮಣಿಯಲೇ ಬೇಕು. ವಿಜಯೇಂದ್ರ ತಂದೆಯಾಗಿ ಟಿಕೆಟ್ ನೀಡದೇ ಇದ್ದರೂ ಕ್ಷೇತ್ರದ ಕಾರ್ಯಕರ್ತರ ಒತ್ತಾಯಕ್ಕೆ ನೀಡಬೇಕು. ಕೇಂದ್ರ ಸಚಿವರಾದ ಅನಂತ್ ಕುಮಾರ್ ಹಾಗೂ ಬಿಜೆಪಿ ನಾಯಕರಾದ ರಾಮ್ ದಾಸ್ ಅವರ ಬಳಿಯೂ ಮಾತನಾಡುತ್ತೇವೆ ಎಂದರು.

ವಿಜಯೇಂದ್ರ ಅವರು ಕ್ಷೇತ್ರದಲ್ಲಿ ಮಾಡಿರುವ ಪ್ರಭಾವದಿಂದ ಸಿದ್ದರಾಮಯ್ಯ ಅವರ ಮಗ ಸೋಲುವುದು ನಿಶ್ಚಿತ. ಸಿಎಂ ಅವರು ಸಹ ಸೋಲುವುದು ಖಚಿತ. ಕ್ಷೇತ್ರದಲ್ಲಿನ ಎಲ್ಲಾ ನಾಯಕರು, ಟಿಕೆಟ್ ಆಕಾಂಕ್ಷಿಗಳು ಸಹ ವಿಜಯೇಂದ್ರ ಅವರಿಗೆ ಬೆಂಬಲ ನೀಡಿದ್ದಾರೆ. ನಾಳೆ ಬೆಳಗ್ಗೆಯವರೆಗೂ ಸಮಯವಿದೆ ಎಲ್ಲವೂ ಸೂಕ್ತವಾಗಿ ನಡೆಯಲಿದೆ. ವಿಜಯೇಂದ್ರ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *