55 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ!

ನ್ಯೂಸ್ ಕನ್ನಡ ವರದಿ-(24.04.18): ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸಿಲ್‌ ದರ ಕಳೆದ 55 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು. ಗ್ರಾಹಕರ ಮೇಲೆ ಹೊರೆಯನ್ನು ಕಡಿಮೆ ಮಾಡಲು ಸರಕಾರ ಈ ಸಂದರ್ಭದಲ್ಲಿ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಇಳಿಸಬೇಕು ಎಂಬ ಕೂಗು ಈಗ ಪುನಃ ಮುಗಿಲು ಮುಟ್ಟಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವಾಲಯ ತೈಲ ಮಾರಾಟ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದೆ; ಅಂತೆಯೇ ಹಣಕಾಸು ಸಚಿವಾಲಯದೊಡನೆಯೂ ಮಾತುಕತೆ ನಿಗದಿಸಿದೆ. ದಕ್ಷಿಣ ಏಶ್ಯದಲ್ಲೇ ಅತ್ಯಧಿಕ ಇಂಧನ ದರ ಇರುವುದು ಭಾರತದಲ್ಲಿ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ಈಗ 74.50 ರೂ. ಇದೆ. ಇದು 2013ರ ಸೆ.14ರ ಬಳಿಕದ (76.06 ರೂ.) ಗರಿಷ್ಠ ದರವಾಗಿದೆ. ಇದೇ ರೀತಿ ಡೀಸಿಲ್‌ ದರ ಲೀಟರ್‌ಗೆ 65.75 ರೂ.ಗೆ ಏರಿದೆ.

ಗ್ರಾಹಕರು ಪ್ರತೀ ಲೀಟರ್‌ ಇಂಧನಕ್ಕೆ ತೆರುವ ಒಟ್ಟು ದರದ ಅರ್ಧಾಂಶ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಅಬಕಾರಿ ಸುಂಕ ರೂಪದಲ್ಲಿ ದಕ್ಕುತ್ತದೆ. ಕೇಂದ್ರ ಅಬಕಾರಿ ಸುಂಕ ಲೀಟರ್‌ ಪೆಟ್ರೋಲ್‌ ಗೆ 19.48 ರೂ. ಇದೆ; ಡೀಸಿಲ್‌ ಮೇಲೆ 15.33 ರೂ. ಇದೆ. ರಾಜ್ಯ ಸರಕಾರಗಳು ಇದರ ಮೇಲೆ ವ್ಯಾಟ್‌ (ಮಾರಾಟ ತೆರಿಗೆ) ಹೇರುತ್ತದೆ. ದಿಲ್ಲಿಯಲ್ಲಿ ಪೆಟ್ರೋಲ್‌ ಲೀಟರ್‌ ಮೇಲೆ ವ್ಯಾಟ್‌ 15.84 ಮತ್ತು ಡೀಸಿಲ್‌ ಮೇಲೆ 9.68 ಇದೆ.

Leave a Reply

Your email address will not be published. Required fields are marked *