ಭಾರತ ತಂಡಕ್ಕೂ ಮುಂಚೆ ಪಾಕಿಸ್ತಾನದ ಪರವಾಗಿ ಕ್ರಿಕೆಟ್ ಆಡಿದ್ದ ಸಚಿನ್ ತೆಂಡೂಲ್ಕರ್!
ನ್ಯೂಸ್ ಕನ್ನಡ ವರದಿ-(24.04.18): ಕ್ರಿಕೆಟ್ ಒಂದು ಧರ್ಮವಾಗಿದ್ದರೆ, ಸಚಿನ್ ತೆಂಡೂಲ್ಕರ್ ದೇವರು ಎನ್ನುವ ಮಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಸದಾ ನಲಿದಾಡುತ್ತದೆ. ಸಚಿನ್ ತೆಂಡೂಲ್ಕರ್ ಎಂದರೆ ಭಾರತೀಯರಿಗೆ ಹೆಮ್ಮೆ. ಭಾರತದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ ಕೀರ್ತಿಯು ಸಚಿನ್ ತೆಂಡೂಲ್ಕರ್ ಗೆ ಸಲ್ಲುತ್ತದೆ. ಇದೀಗ ಸಚಿನ್ ಮೊದಲು ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು ಪಾಕಿಸ್ತಾನ ತಂಡದ ಪರ ಎಂದರೆ ನಂಬಲು ಸಾಧ್ಯವೇ? ನಂಬಲೇಬೇಕು. ಈ ಮಾತನ್ನು ಸ್ವತಃ ಸಚಿನ್ ತೆಂಡೂಲ್ಕರ್ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಭಾರತೀಯ ಕ್ರಿಕೆಟ್ ತಂಡದಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು 1989ರಲ್ಲಿ. ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯಾಟದಲ್ಲಿ ಸಚಿನ್ ಪಾದಾರ್ಪಣೆ ಮಾಡಿದ್ದರು. ಆದರೆ ಇದಕ್ಕೂ ಮುಂಚೆ ಅಂದರೆ 1987ರಲ್ಲಿ ಸಚಿನ್ ಗೆ 14 ವರ್ಷ ವಯಸ್ಸಾಗಿದ್ದ ಸಂದರ್ಭ ಪಾಕಿಸ್ತಾನ ತಂಡದ ಪರವಾಗಿ ಫೀಲ್ಡಿಂಗ್ ನಡೆಸಿದ್ದರು. ಪಾಕಿಸ್ತಾನದ ಆಟಗಾರರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದರ್ ಊಟದ ವಿರಾಮಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಸಚಿನ್ ಹಾಗೂ ಇನ್ನಿಬ್ಬರು ಯುವಕರಿಗೆ ಫೀಲ್ಡಿಂಗ್ ಮಾಡಲು ಪಾಕ್ ನಾಯಕ ಇಮ್ರಾನ್ ಖಾನ್ ಅವಕಾಶ ಒದಗಿಸಿದ್ದರು. ಈ ಸ್ವಾರಸ್ಯಕ್ರ ಘಟನೆಯನ್ನು ಸಚಿನ್ ತಮ್ಮ ಆತ್ಮಕಥೆ ಪ್ಲೇಯಿಂಗ್ ಇಟ್ ಮೈ ವೇಯಲ್ಲಿ ಉಲ್ಲೇಖಿಸಿದ್ದಾರೆ.
1987ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಭಾರತೀಯ ಕ್ರಿಕೆಟ್ ಕ್ಲಬ್ ನ ಸುವರ್ಣ ಮಹೋತ್ಸವದ ಸಲುವಾಗಿ 40 ಓವರ್ ಗಳ ಪ್ರದರ್ಶನ ಪಂದ್ಯವನ್ನು ಏರ್ಪಡಿಸಲಾಗಿತ್ತು. ಮುಂಬೈನ ಬ್ರಬೋನ್ ಸ್ಟೇಡಿಯಂನಲ್ಲಿ ಈ ಪಂದ್ಯವು ನಡೆದಿತ್ತು. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನೀಲ್ ಗಾವಸ್ಕರ್ ರವರ ಕೊನೆಯ ಪಂದ್ಯವೂ ಇದಾಗಿತ್ತು. ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಗೆ 14 ವರ್ಷವೂ ತುಂಬಿರಲಿಲ್ಲ. ಆದರೆ ಸಿಕ್ಕಿದ ಅವಕಾಶವನ್ನು ಬಿಡದ ಸಚಿನ್ ಪಾಕ್ ತಂಡದ ಪರ ಫೀಲ್ಡಿಂಗ್ ನಡೆಸಿದರು. ಈ ಪಂದ್ಯದಲ್ಲಿ 189 ರನ್ ಗಳನ್ನು ಬೆನ್ನಟ್ಟಿದ ಭಾರತ ತಂಡವು ಜಯಗಳಿಸಿತ್ತು.