ಮರಣ ಹೊಂದಿದ ಅನ್ನದಾತನ ಗೋರಿಯ ಬಳಿ ಬೆಕ್ಕಿನ ರೋಧನ!

ಮನುಷ್ಯ ಮನುಷ್ಯನನ್ನು ಧ್ವೇಷಿಸುವ ಪ್ರಸಕ್ತ ಸನ್ನಿವೇಶದಲ್ಲಿ, ಬೆಕ್ಕೊಂದು ತನಗೆ ಊಟ ನೀಡಿದ ವ್ಯಕ್ತಿ ಮರಣ ಹೊಂದಿದ್ದಾನೆ ಎಂದು ತಿಳಿದಾಗ ತನ್ನ ಹೊಟ್ಟೆಗೆ ಏನೂ ಸೇವಿಸದೆ ಆ ವ್ಯಕ್ತಿಯ ಖಬರ್(ಗೋರಿ) ಬಳಿಯಲ್ಲಿ ಮಲಗಿದ ಮನಮಿಡಿಯುವ ಘಟನೆಯಿದು.

ಸುಳ್ಯ ತಾಲೂಕಿನ ಬೆಳ್ಳಾರೆಯ ತಡಗಜೆ ಎಂಬಲ್ಲಿನ ನಿವಾಸಿ ಕೆ.ಎಂ.ಆಂದುಂಞಿ ಎಂಬವರು ಕಳೆದ ಏಪ್ರಿಲ್ 8ರಂದು ಹೃದಯಾಘಾತದಿಂದ ಮರಣ ಹೊಂದುತ್ತಾರೆ. ಅವರು ಮನೆಯಲ್ಲಿ ಒಂದು ಬೆಕ್ಕನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದರು. ತನ್ನ ಕೈಯಿಂದಲೇ ಬೆಕ್ಕಿಗೆ ಊಟ ಹಾಕುತ್ತಿದ್ದರು. ಮಾತ್ರವಲ್ಲ ತನಗೆ ಹೃದಯದ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೊರಡುವ ಸಮಯದಲ್ಲಿ ತನ್ನ ಮುದ್ದಿನ ಬೆಕ್ಕಿನ ತಲೆಯನ್ನು ಸವರಿ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಆಸ್ಪತ್ರೆಗೆ ಹೊರಡುತ್ತಾರೆ. ಕಾರು ಅಲ್ಪ ಕ್ರಮಿಸಿದಾಗ ತನ್ನ ಪ್ರೀತಿಯ ಪತ್ನಿಯ ಮಡಿಲಲ್ಲೇ ಚಿರ ನಿದ್ರೆಗೆ ಜಾರುತ್ತಾರೆ.

ಅವರ ಪಾರ್ಥಿವ ಶರೀರವನ್ನು ಮನೆಗೆ ತಂದಾಗ ಜನ ಸಮೂಹ ಸೇರಿದ್ದನ್ನು ನೋಡಿದ ಬೆಕ್ಕು ಬಹಳ ಮಂಕಾಗಿದೆ. ತನಗೆ ಊಟ ಹಾಕುತ್ತಿದ್ದ ಮನೆಯೊಡಯನಿಗೆ ಏನೋ ಸಂಭವಿಸಿದೆಯೆಂದು ದೃಢಪಡಿಸಿಕೊಂಡ ಬೆಕ್ಕು ಏನೂ ತಿನ್ನಲಿಲ್ಲವಂತೆ.

ಮರ್ಹೂಮ್ ಅಂದಂಞಿಯವರ ಮೃತ ದೇಹವನ್ನು ದಫನ ಮಾಡಿದ ನಂತರ ಮನೆಯಲ್ಲಿ ಬೆಕ್ಕು ಕಾಣೆಯಾದುದು ಮನೆಯವರ ಗಮನಕ್ಕೆ ಬಂದಿದೆ. ಎಲ್ಲಿಗೋ ಹೋಗಿರಬಹುದೆಂದು ಸುಮ್ಮನಾಗುತ್ತಾರೆ. ಆದರೆ ಮಸೀದಿಯಲ್ಲಿ ಅಸರ್ ನಮಾಝ್ ಮಾಡಲು ಹೋದವರಿಗೆ ಕಂಡದ್ದು ಮಾತ್ರ ಯಾರಿಗೂ ಕಣ್ಣಲ್ಲಿ ನೀರು ಬರಿಸುವ ದೃಶ್ಯ. ಮಸೀದಿಯ ದಫನ ಭೂಮಿಯಲ್ಲಿ ಬೆಕ್ಕು ಅಂದುಂಞಿಯವರ ಖಬರ್ ಸಮೀಪ ಕುಳಿತಿರುವುದು ಕಂಡು ಬಹಳ ದುಖದೊಂದಿಗೆ ಆಶ್ಚರ್ಯಗೊಳ್ಳತ್ತಾರೆ. ತನಗೆ ಊಟ ನೀಡುತ್ತಿದ್ದ ವ್ಯಕ್ತಿಯ ಗೋರಿಯ ಸಮೀಪ ತಾನು ಮಲಗುವ ಮೂಲಕ ಬೆಕ್ಕು ನೋಡುಗರನ್ನು ದಂಗಾಗಿಸಿದೆ.

ಬೆಕ್ಕನ್ನು ಪ್ರವಾದಿ ಮುಹಮ್ಮದ್(ಸ.ಅ) ರವರು ಹಾಗೂ ಸ್ವಹಾಬಿಗಳು ಬಹಳ ಪ್ರೀತಿಸುವ ಒಂದು ಪ್ರಾಣಿಯಾಗಿದೆ. ಆದುರಿಂದ ಬೆಕ್ಕಿಗೆ ಇಸ್ಲಾಮಿನಲ್ಲಿ ಬಹಳ ಮಹತ್ವದ ಸ್ಥಾನವಿದೆ.

ಅಂದಂಞಿಯವರು ಜೀವನದುದ್ದಕ್ಕೂ ನಗುಮುಖದಿಂದಲೇ ಎಲ್ಲರೊಂದಿಗೂ ಮಾತನಾಡುತ್ತಿದ್ದರು. ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ ಬೆರೆಯುತ್ತಿದ್ದರು. ಎಲ್ಲಾ ಜಾತಿ ಧರ್ಮದವರನ್ನೂ ಸಹೋದರರಂತೆ ಕಾಣುತ್ತಿದ್ದರು. ತನ್ನ ಮಾತು ಕೃತಿಗಳ ಮೂಲಕ ಇದುವರೆಗೂ ನೋಯಿಸಿದವರಲ್ಲ ಮರ್ಹೂಮ್ ಅಂದಂಞಿಯವರು. ಇಂತಹ ಒಂದು ಮೃದು ಸ್ವಭಾವದ ಮನುಷ್ಯನ ನಿಧನಕ್ಕೆ ಮನುಷ್ಯರೊಂದಿಗೆ ಮೂಕ ಪ್ರಾಣಿ ಬೆಕ್ಕು ಕೂಡ ಯಾರಿಗೂ ಕೇಳಿಸಿದ ರೀತಿಯಲ್ಲಿ ರೋಧಿಸಿತು.ಇದು ಮನುಷ್ಯತ್ವ ಇರುವ ವ್ಯಕ್ತಿಯನ್ನು ಜೀವನನುದ್ದಕ್ಕೂ ಮಾತ್ರವಲ್ಲ ಮರಣಾನಂತರವು ಎಲ್ಲರೂ ಗೌರವಿಸುತ್ತಾರೆ ಎಂಬುವುದಕ್ಕೊಂದು ಉದಾಹರಣೆಯಾಗಿದೆ. ಮರ್ಹೂಮ್ ಅಂದುಂಞಿಯವರು ಅನ್ಸಾರ್ ಬೆಳ್ಳಾರೆಯವರ ತಂದೆಯಾಗಿರುತ್ತಾರೆ.

ತಮ್ಮ ಸ್ವಾರ್ಥಕ್ಕಾಗಿ ಭೂಮಿಯ ಮೇಲೆ ಪರಸ್ಪರ ಕಚ್ಚಾಡುವ ಮನುಷ್ಯ ಈ ಮೂಕ ಪ್ರಾಣಿಯಾದ ಬೆಕ್ಕಿನಿಂದ ಬಹಳ ಪಾಠ ಕಲಿಯಬೇಕಾಗಿದೆ.

-ಎಸ್.ಎ.ರಹಿಮಾನ್ ಮಿತ್ತೂರು

Leave a Reply

Your email address will not be published. Required fields are marked *