ಯು.ಟಿ ಖಾದರ್ ಹಿಂದೂ ಮತ್ತು ಮುಸ್ಲಿಮರಿಗೆ ಸಮಾನ ನ್ಯಾಯ ನೀಡಲಿ: ಎಸ್ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಎಸ್ಡೀಪಿಐ ರಾಜಕೀಯ ಕಾಂಪ್ರಮೈಸ್ ಗಳಿಗೆ ಶರಣಾಗಿದೆ. ಎಸ್ಡೀಪಿಐನ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರೊಂದಿಗೆ ನಾವು ನಡೆಸಿದ ಸಂದರ್ಶನ ಇಲ್ಲಿದೆ…

ಉಳ್ಳಾಲದಲ್ಲಿ ಎಸ್ಡೀಪಿಐ ಅಭ್ಯರ್ಥಿಯನ್ನು ಹಾಕುವುದಿಲ್ಲ ಯಾಕೆ ?

ಉಳ್ಳಾಲದಲ್ಲಿ ಈಗಾಗಲೇ ಸಮುದಾಯಪರ ಧ್ವನಿ ಎತ್ತುವ ಹಾಗೇ ಪ್ರಾಮಾಣಿಕ ವ್ಯಕ್ತಿ ಮಾಜಿ ಮೇಯರ್ ಅಶ್ರಫ್ ರವರು ಅಲ್ಲಿ ಕಣಕ್ಕೆ ಇಳಿದಿರುವಾಗ ನಮ್ಮ ನಿಲುವನ್ನು ಕಾಯ್ದಿರಿಸಿದ್ದೇವೆ.

ರಾಜ್ಯದಲ್ಲಿ ಏಳು ಕ್ಷೇತ್ರದಲ್ಲಿ ಮಾತ್ರವೇ ನೀವು ಸ್ಪರ್ಧಿಸುವ ಬಗ್ಗೆ ಮಾಹಿತಿ ಇದೆ. ಇದಕ್ಕೆ ಕಾರಣ ಏನು ?

ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಅದು ನಾಳೆ 3 ಆಗಬಹುದು. ಅಥವಾ ನಮ್ಮ ಬೇಡಿಕೆಗಳ ಒತ್ತಾಯಕ್ಕೆ ಜಾತ್ಯಾತೀತ ಎನ್ನುವ ಸರಕಾರ ಒಪ್ಪದೇ ಇದ್ದಾಗ ಅದು 14 ಆಗಬಹುದು.

ಕಳೆದ 5 ವರ್ಷ ಕಾಂಗ್ರೇಸ್ಸ್ ವಿರುದ್ಧ ಹೋರಾಟ ಮಾಡಿದ ನೀವು ಈಗ ಅವರನ್ನು ಜಾತ್ಯಾತೀತರು ಎಂದು ಗುರುತಿಸಲು ಕಾರಣ ಏನು ?

ಮುಸ್ಲಿಮರ ಮತ್ತು ದಲಿತ ಹಾಗೇ ಹಿಂದುಳಿದವರ ಕಲ್ಯಾಣ ಬಯಸುವ ವ್ಯಕ್ತಿಯಾಗಿದ್ದಾರೆ ಸಿದ್ದರಾಮಯ್ಯ . ಅವರಲ್ಲಿ ನಮ್ಮ ಬೇಡಿಕೆಗಳಿಗೆ ಹೆಚ್ಚು ಮಹತ್ವ ಸಿಗುತ್ತದೆ. ಆದರೆ ಮನುಷ್ಯ ವಿರೋಧಿ ಮತ್ತು ಸಂವಿಧಾನ ಬದಲಾಗಿಸುವ ಸಿದ್ದಾಂತ ಇರುವ ಪಕ್ಷವಾದ ಬಿಜೆಪಿ ಬಂದರೆ ಅವರು ಜನರ ಶಾಂತಿ – ನೆಮ್ಮದಿ ಹಾಗೇ ಅಭಿವೃದ್ದಿಯನ್ನು ಕಡೆಗಣಿಸಿ ರಾಜ್ಯದ ಸಮಾದಾನ ಹಾಳು ಮಾಡಬಹುದು. ಈ ಮೊದಲು ಸಿದ್ದರಾಮಯ್ಯ ಸರಕಾರ 2 ಸಾವಿರ ಕೋಟಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಮೀಸಲು ಕೊಟ್ಟಿದ್ದರ ಹಿಂದೆ ಎಸ್ಡೀಪಿಐ ಪಕ್ಷದ ನಾಯಕರ ಬೇಡಿಕೆ ಮತ್ತು ಒತ್ತಾಯ ಇತ್ತು.

ಸಿದ್ದರಾಮಯ್ಯ ಮತ್ತು ರಮಾನಾಥ ರೈ ಇವರಲ್ಲಿ ತಾವು ಯಾವ ಜಾತ್ಯಾತೀತ ನಾಯಕನನ್ನು ಇಷ್ಟಪಡುತ್ತೀರಿ ?

ಸಿದ್ದರಾಮಯ್ಯ ಸರ್ಕಾರ ಜನಪರವಾಗಿದೆ. ಆದರೆ ರಮಾನಾಥ ರೈ ಕುರಿತು ನಾನು ಯಾವುದೇ ಅಭಿಪ್ರಾಯ ಹೇಳುವುದಿಲ್ಲ. ನಮ್ಮ ರಾಜ್ಯದ ನಾಯಕರ ತೀರ್ಮಾನವೇ ಅಂತಿಮ. ನಮ್ಮ ಪಕ್ಷ ಶಿಸ್ತಿನ ಪಕ್ಷ. ನಾವು ಲೆಕ್ಕಾಚಾರವಿಲ್ಲದೆ ಯಾವುದೇ ನಿರ್ಧಾರ ಮಾಡುವುದಿಲ್ಲ.

ಕೋಮುವಾದಿಗಳಿಗೆ ನೀವು ಸಿಂಹಸ್ವಪ್ನ ? ಆದರೆ ರಾಜಕೀಯ ರಣರಂಗದಿಂದ ಪಲಾಯನ ಯಾಕೆ ?

ನಾವು ಕೋಮುವಾದಿಗಳ ವಿರುದ್ಧದ ಹೋರಾಟಕ್ಕೆ ಚೈತನ್ಯ ಮತ್ತು ಧೈರ್ಯ ತುಂಬಿದವರು. ಪೆಟ್ಟು ತಿಂದು ಸುಮ್ಮನೆ ಇರುವ ಸಮುದಾಯ ಮತ್ತು ಸಮಾಜಕ್ಕೆ ಪ್ರತಿಭಟಿಸುವ ಹಾಗೇ ಹೋರಾಟ ಮಾಡಿ ಹಕ್ಕುಗಳನ್ನು ಪಡೆಯುವ ಆತ್ಮ ಧೈರ್ಯವನ್ನು ತುಂಬಿದ್ದೇವೆ. ನಮ್ಮ ಹೋರಾಟವು ಕೋಮುವಾದಿಗಳಿಗೆ ಪೋಷಕ ಆಗಬಾರದು ಅದಕ್ಕಾಗಿ ರಾಜಕೀಯದಲ್ಲಿ ಕೆಲವು ರಣನೀತಿ ರೂಪಿಸಿದ್ದೇವೆ. ನಮ್ಮ ನೀತಿಗಳು ಲೆಕ್ಕಚಾರದಲ್ಲಿರುತ್ತದೆ.

ನಿಮ್ಮ ರಣನೀತಿ ಮತ್ತು ಹೋರಾಟದಲ್ಲಿ ನಮ್ಮ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರಲ್ಲ ? ಸುಮ್ಮನೆ ಇದ್ದಾಗ 5 ಖೇಸು ಇತ್ತು ಈಗ 300 ಇದೆ ?

ಹೋರಾಟ ಮಾಡುವಾಗ ಇದೆಲ್ಲ ಸಾಮಾನ್ಯ. ಇಲಾಖೆಗಳು ತಾರತಮ್ಯ ಮಾಡುತ್ತಿದೆ. ನಮಗೆ ನ್ಯಾಯ ಮತ್ತು ಹಕ್ಕುಗಳ ಬೇಡಿಕೆ ಇದೆ. ಅದು ಸಿಗುವವರೆಗೆ ಹೋರಾಟ ಮಾಡುತ್ತೇವೆ. ಸುಮ್ಮನಿದ್ದಾಗ ಮೂರು ಖೇಸು ಈಗ ಮುನ್ನೂರು ಖೇಸು ಅದರಲ್ಲಿ ಜಿಲ್ಲೆಯ ಕೆಲವು ರಾಜಕಾರಣಿಗಳ ಪಾತ್ರ ಇದೆ.

ನಿಮ್ಮ ಯಾವ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ? ನಿಮ್ಮ ಬೇಡಿಕೆ ಯಾವುದು ಈಡೇರಿದೆ ? ಈ ಪ್ರತಿಭಟನೆ ದೌರ್ಜನ್ಯ ಬಿಟ್ಟು ಸಮುದಾಯದ ಸಬಲೀಕರಣಕ್ಕೆ ನಿಮ್ಮ ಕೊಡುಗೆ ಯಾವುದು ?

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನಾವು ಅವಿರತ ಶ್ರಮಿಸುತ್ತಿದ್ದೇವೆ. ಎಸ್ಡೀಪಿಐ ಹೋರಾಟಗಳಿಂದ ಹಲವು ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಕ್ಕಿದೆ. ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಮಾಹಿತಿ ಕೇಂದ್ರ ಎಲ್ಲಾ ಜಿಲ್ಲೆಯಲ್ಲೂ ಇದೆ. ಮುಂದೆ ಹಲವಾರು ಬೇಡಿಕೆ ಸರಕಾರಕ್ಕೆ ಇಟ್ಟಿದ್ದೇವೆ. ಅದನ್ನು ಈಡೇರಿಸುವ ಪಕ್ಷಕ್ಕೆ ಬೆಂಬಲವಾಗಿ ಚುನಾವಣಾ ನೀತಿ ರೂಪಿಸುತ್ತೇವೆ.

ನಿಮ್ಮ ಕಾರ್ಯಕರ್ತರು UT ಖಾದರನ್ನು ಅವಹೇಳಿಸುತ್ತಿದ್ದಾರೆ ಇದಕ್ಕೆ ಏನು ಹೇಳುತ್ತೀರಿ ?

UT ಖಾದರ್ ಬಗ್ಗೆ ನಮಗೆ ದ್ವೇಷ ಇಲ್ಲ. ನಮ್ಮ ಅಧಿಕೃತ ಕಾರ್ಯಕರ್ತರು ಯಾರೂ ಯುಟೀ ಖಾದರನ್ನು ಅವಹೇಳನ ಮಾಡಿಲ್ಲ. ಹಾಗೇನಾದರೂ ಇದ್ದರೆ ನಮಗೆ ಪ್ರೂಫ್ ಕೊಡಿ. ನಾವು ಖಾದರ್ ವಿರೋದಿಯಲ್ಲ ಅವರ ಕೆಲವು ನಿಲುವುಗಳನ್ನು ವಿರೋಧಿಸುತ್ತೇವೆ. ಆದರೆ ಅದು ವ್ಯಯುಕ್ತಿಕವಾದ ವಿರೋದವಲ್ಲ. ಖಾದರ್ ಸಮುದಾಯಕ್ಕೆ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದರೆ ಹಾಗೇ ನ್ಯಾಯದ ಬೇಡಿಕೆ ಈಡೇರಿಸಿ ನೊಂದವರ ಧ್ವನಿಯಾದರೆ ನಾವು ಅವರನ್ನೂ ಗೌರವಿಸುತ್ತೇವೆ. ನಮಗೆ ಖಾದರ್ ಮುಖ್ಯವಲ್ಲ ನಮಗೆ ನಮ್ಮ ಸಮುದಯಾದ ಆತ್ಮಾಭಿಮಾನ ಹಾಗೇ ಸ್ವಾಭಿಮಾನದ ಬದುಕು ಮುಖ್ಯ.

ಯೂಟೀ ಖಾದರ್ ಬಗ್ಗೆ ನಮಗೆ ಗೌರವ ಇದೆ. ಸಮುದಾಯಕ್ಕೆ ಅನ್ಯಾಯವಾದಾಗ ಮತ್ತು ನಮ್ಮ ಮೇಲೆ ದಾಳಿ ಆದಾಗ ಹಾಗೇ ಪೋಲೀಸ್ ದೌರ್ಜನ್ಯ ನಡೆದಾಗ ಅವರ ಮೌನ ನಮ್ಮನ್ನು ಹತಾಶರನ್ನಾಗಿಸಿದೆ. ಮುಸ್ಲಿಮರಿಗೆ ನ್ಯಾಯ ನಿರಾಕರಿಸಲು ಅವರೂ ಜೊತೆ ಸೇರಿದ್ದು ನಮಗೆ ಅಚ್ಚರಿ ಮೂಡಿಸಿದೆ, ನ್ಯಾಯಯುತ ನಮ್ಮ ಬೇಡಿಕೆ ಗಳಿಗೆ ಸ್ಪಂದಿಸಲಿಲ್ಲ, ನಮ್ಮನ್ನು ಅತ್ಯಂತ ನಿರ್ಧಯವಾಗಿ ನಡೆಸಿಕೊಂಡಿದ್ದಾರೆ. ಪವರ್ ಪುಲ್ ಮಿನಿಸ್ಟರ್ ಆಗಿದ್ದರೂ ಸಮುದಾಯದ ಪರವಾಗಿ ಅವರು ಪವರ್ ಲೆಸ್ಸ್ ಆಗಿದ್ದರು. ಕೋಣಾಜೆಯ ಕಾರ್ತಿಕ್ ಕೊಲೆಯಲ್ಲಿ ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸಿದಾಗ ಸುಮ್ಮನೆ ಕುಳಿತಿದ್ದರು. ಅವರೂ ಸಂಘಪರಿವಾರದ ಅಪವಾದವನ್ನು ನಂಬಿ ನಮ್ಮ ಸಮುದಾಯವನ್ನು ಅವಮಾನಪಡಿಸಲು ನೆರವಾದರು. ಅನಂತರ ಆ ಖೇಸಿನಲ್ಲಿ ನೈಜ ಆರೋಪಿ ಕಾರ್ತಿಕ್ ನ ಸಹೋದರಿ ಬಂಧನವಾದಾಗ ಅದಕ್ಕೆ ಕಾರಣಕರ್ತರಾದ ಇಲಾಖೆಯ ಅಧಿಕಾರಿಗಳ ವಿರುದ್ದ ಯಾವುದೇ ಕ್ರಮ ಜರುಗಿಸಲಿಲ್ಲ, ಹೊರತಾಗಿ ಸಮುದಾಯಕ್ಕೆ ಆದ ಅನ್ಯಾಯವನ್ನು ಸಹಿಸಿಕೊಳ್ಳಿ ಅಥವಾ ನಿಮ್ಮ ಕರ್ಮ ಅನುಭವಿಸಿ ಎಂಬ ಉದ್ದೇಶ ಮಾಡಿ ಸುಮ್ಮನೇ ಕುಳಿತರು. ವಿಧಾನ ಸೌಧಾದಲ್ಲಿ ಮುಸ್ಲಿಮರ ಪರವಾಗಿ ಅಥವಾ ಕೋಮುವಾದಿಗಳು ಕರಾವಳಿಯಲ್ಲಿ ಮಾಡುವ ಅಕ್ರಮದ ವಿರುದ್ದ ಧ್ವನಿ ಎತ್ತಲಿಲ್ಲ.

ಒಬ್ಬ ನಾಯಕ ಮುಸ್ಲಿಮ್ ಪರವಾಗಿ ಇರಬೇಕೆಂದು ನಮ್ಮ ಒತ್ತಾಯವಲ್ಲ. ಆತ ನ್ಯಾಯ ಮತ್ತು ಸತ್ಯದ ಪರವಾಗಿ ಇರಬೇಕು. ಕುರೈಶಿ ಪ್ರಕರಣದಲ್ಲೂ ಪೋಲೀಸರನ್ನು ಸಂರಕ್ಷಿಸಲು ಅವರು ಕಸರತ್ತು ಮಾಡಿದ್ದರು. ಉಳ್ಳಾಲದಲ್ಲಿಯೇ ಹಲವಾರು ಅಮಾಯಕ ಯುವಕರನ್ನು ಬಂದಿಸಿದಾಗ ಅವರ ವಿರುದ್ದ ಕಠಿಣ ಸೆಕ್ಷನ್ ಹಾಕಿದಾಗ ಅಲ್ಲೂ ದ್ವೇಷ ಮತ್ತು ನಿರ್ಲ್ಯಕ್ಷದ ರಾಜಕೀಯ ಮಾಡಿದ್ದಾರೆ. ಅವರು ಹಿಂದುಗಳಿಗೂ ಮುಸ್ಲಿಮರಿಗೂ ಸಮಾನ ನ್ಯಾಯ ಕೊಡಲಿ. ತಪ್ಪು ಮಾಡಿದ ಯಾರನ್ನೂ ರಕ್ಷಿಸುವುದು ಬೇಡ ಆದರೂ ಮುಸ್ಲಿಮ್ ಎನ್ನುವಾಗ ತಾತ್ಸಾರ ಮತ್ತು ಸಾಯಲಿ ಬಿಡು ಎನ್ನುವ ನಿಲುವು ತುಂಬಾ ನೋವು ಮಾಡುತ್ತದೆ. ನೀವೇ ಹೇಳಿ ‘ಯುಟೀ ಖಾದರ್ ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆ ಯಾವುದು ? ಒಟ್ಟು ಸಮುದಾಯ ಅವರನ್ನು ನೆನಪಿಸಿಕೊಳ್ಳುವ ಏನನ್ನು ಮಾಡಿದ್ದಾರೆ ? ಈಗ ಅವರ ಪೋಟೋ ನೂರಾರು ಬರುತ್ತದೆ ಅಲ್ಲಿ ಹೋದರು ಇಲ್ಲಿ ಸಿಕ್ಕಿದರು ಎಂದು, ಅದರಲ್ಲಿ ಒಂದಾದರೂ ಐದು ವರ್ಷದಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆ ಇದೆಯಾ ? ಒಟ್ಟು ಸಮುದಾಯವೇ ಗೌರವ ಪಡುವ ಕಾರ್ಯ ಅವರು ಮಾಡಲಿ ನಾವು ಅವರನ್ನು ಬೆಂಬಲಿಸುತ್ತೇವೆ.ಹಿಂದೂಗಳಿಗೂ ಹಾಗೇ ಅವರ ಕ್ಷೇತ್ರದ ಎಲ್ಲಾ ವರ್ಗದ ಜನರಿಗೆ ಸರಿಯಾದ ನ್ಯಾಯ ಮತ್ತು ಸೌಲಭ್ಯ ನೀಡಲಿ ನಾವು ಅವರನ್ನು ಗೌರವಿಸುತ್ತೇವೆ.

ನಮ್ಮ ನೋವು ಅವರಿಗೆ ಅರ್ಥವಾಗುವುದಿಲ್ಲ. ಕಾರ್ತಿಕ್ ಕೊಲೆಯ ಕೇಸಿನ ಕುರಿತು ವಿಧಾನ ಸಭೆಯಲ್ಲಿ ಬಿಜೆಪಿಯ ಬಣ್ಣ ಬಯಲುಗೊಳಿಸುವ ಅವಕಾಶ ಇತ್ತು. ಆದರೂ ಇಬ್ಬರೂ ಸಚಿವರು ಏನೂ ನಡೆದಿಲ್ಲ ಅದು ಮುಸ್ಲಿಮರ ಹಣೆಬರಹ ಅವರು ಸಹಿಸಿಕೊಳ್ಳುತ್ತಾರೆ ಎಂದು ತೀರ್ಮಾನಿಸಿ ಸುಮ್ಮನಾಗಿದ್ದಾರೆ. ಸಿದ್ದರಾಮಯ್ಯರವರಿಗೆ ಸುಳ್ಳು ಮಾಹಿತಿ ಕೊಟ್ಟು ನಾವು ಜಾತ್ಯಾತೀತರು ಎಂದು ನಿರೂಪಿಸಲು ಪ್ರಯತ್ನಿಸಿದ್ದಾರೆ. ಸರಕಾರ 2 ಸಾವಿರ ಕೋಟಿ ನಮ್ಮ ಅಭಿವೃದ್ದಿಗೆ ನೀಡಿದೆ. ಅದರಲ್ಲಿ 800 ಕೋಟಿಯ ಲೆಕ್ಕವೇ ಇಲ್ಲ. ಅದನ್ನು ಒಮ್ಮೆ ನಿಂತು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದ ಸಚಿವರು ನಮ್ಮ ನಾಯಕರು. ಅವರನ್ನು ಭೇಟಿಯಾದೆ, ಇವರನ್ನು ಭೇಟಿಯಾದೆ ಎನ್ನುವುದಲ್ಲ ಸಾಧನೆ, ಒಟ್ಟು ಹಿಂದೂ ಮುಸ್ಲಿಮರ ಸೌಹಾರ್ದತೆ ಮತ್ತು ಹಕ್ಕುಗಳ ರಕ್ಷಣೆಗೆ ಈ ರೀತಿ ಹೋರಾಟ ಮಾಡಿದ್ದೇನೆ ಎನ್ನುವ ಲೆಕ್ಕ ಪ್ರದರ್ಶಿಸಲಿ ಆಗ ನಾವು ಒಬ್ಬ ಅತ್ಯುತ್ತಮ ಜನನಾಯಕನಾಗಿ ಯುಟೀ ಖಾದರ್ ರಿಗೆ ಬೇಷ್ ಎನ್ನುತ್ತೇವೆ. ಹಿಂಬಾಲಕರು ಮತ್ತು ಸಮರ್ಥಕರು ಮುತಾಲಿಕ್ ಗೂ ಇದೆ , ಯಡಿಯೂರಪ್ಪರಿಗೂ ಇದೆ ಹಾಗೆಂದು ನಾವು ಅವರನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಅವರ ಉದ್ದೇಶ ಮತ್ತು ಕೊಡುಗೆಗಳು ನಮಗೆ ಮುಖ್ಯ.

ಸಿದ್ದರಾಮಯ್ಯರನ್ನು ಬೆಂಬಲಿಸುವಾಗ ಯುಟೀ ಖಾದರ್ ರನ್ನೂ ಬೆಂಬಲಿಸಬೇಕಲ್ಲ ?

ನಾವು ಸಿದ್ದರಾಮಯ್ಯರನ್ನು ಬೆಂಬಲಿಸುತ್ತೇವೆ ಎಂದು ಹೇಳಲಿಲ್ಲ. ಜಾತ್ಯಾತೀತ ಸಿದ್ಧಾಂತದ ಇರುವ, ಮುಸ್ಲಿಮರಿಗೆ ಮತ್ತು ಹಿಂದುಳಿದವರಿಗೆ ಹಾಗೇ ಕ್ರೈಸ್ತರಿಗೆ ಸಮಾನ ನ್ಯಾಯ – ಹಕ್ಕು ಮತ್ತು ಸೌಲಭ್ಯ ಕೊಡುವ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಿ ಯಾರಿಗೆ ಹೇಗೆ ಬೆಂಬಲ ಕೊಡಬೇಕು ಎಂದು ನಿರ್ಧರಿಸಿ ಹೆಜ್ಜೆ ಇಡುತ್ತೇವೆ. ನಮ್ಮ ರಾಜ್ಯದ ನಾಯಕರು ಮಾಡುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ,
ಕಾರ್ಯಕರ್ತರೂ ಬದ್ಧರಾಗಿದ್ದಾರೆ. ಕಾರಣ ಅವರು ಅತ್ಯುತ್ತಮ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸ ನಮಗಿದೆ.

ನಿಮ್ಮ ಪಕ್ಷದ ಸಿದ್ಧಾಂತ ಮತ್ತು ಬಿಜೆಪಿಯ ಸಿದ್ಧಾಂತ ನನಗೆ ಬೇರೆ ಬೇರೆ ಅನಿಸುವುದಿಲ್ಲ ?

ನಿಮ್ಮ ಬಗ್ಗೆ ಅಭಿಮಾನ ಇದೆ. ನಿಮ್ಮ ವಿಮರ್ಶೆ ಮತ್ತು ವಿಚಾರ ನಾವು ವಿರೋಧಿಸುವುದಿಲ್ಲ. ನೀವು ಎಲ್ಲರನ್ನೂ ವಿಮರ್ಶಿಸುತ್ತೀರಿ ಹಾಗಾಗಿ ನಾವು ನಿಮ್ಮ ಎಲ್ಲಾ ಲೇಖನದ ಕುರಿತು ಗಂಭೀರವಾಗಿಯೇ ಚಿಂತಿಸುತ್ತೇವೆ. ನಮಗೆ ಅದರಿಂದ ಹಲವು ಆಯ್ಕೆಗಳು ಸಿಗುತ್ತದೆ. ನಮ್ಮ ಸಿದ್ಧಾಂತ ಪ್ರಜಾಪ್ರಭುತ್ವ ಭಾರತದ ಸೌಂದರ್ಯವನ್ನು ಕಾಪಾಡುವುದು ಹಾಗೇ ಸಂವಿಧಾನವನ್ನು ಸಂರಕ್ಷಿಸುವುದು. ಆದರೆ ಬಿಜೆಪಿಯ ಸಿದ್ಧಾಂತ ಅದನ್ನು ಹಾಳು ಮಾಡಿ ಒಡೆದು ಹಾಕುವುದು.

Leave a Reply

Your email address will not be published. Required fields are marked *