ರಾಯುಡು, ಧೋನಿ ಸ್ಫೋಟಕ ಬ್ಯಾಟಿಂಗ್: ಆರ್ಸಿಬಿ ವಿರುದ್ಧ ಜಯ ದಾಖಲಿಸಿದ ಚೆನ್ನೈ ತಂಡ!
ನ್ಯೂಸ್ ಕನ್ನಡ ವರದಿ-(25.04.18): ಇಂಡಿಯನ್ ಪ್ರೀಮಿಯರ್ ಲೀಗ್ ನ 24ನೇ ಪಂದ್ಯಾಟವು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದು, ರೋಚಕ ಪಂದ್ಯಾಟದಲ್ಲಿ ಚೆನ್ನೈ ತಂಡವು ಬೆಂಗಳೂರು ತಂಡದ ವಿರುದ್ಧ ಜಯ ಸಾಧಿಸಿದೆ.
ಮೊದಲು ಟಾಸ್ ಗೆದ್ದ ಚೆನ್ನೈ ತಂಡವು ಬೆಂಗಳೂರು ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 18 ರನ್ ಗಳಿಗೆ ವಿಕೆಟ್ ಕಳೆದುಕೊಂಡರೆ, ಬಳಿಕ ಕ್ವಿಂಟನ್ ಡಿಕಾಕ್ ಹಾಗೂ ಎಬಿಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶೀಸಿದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಎಬಿಡಿ(68) ಇಮ್ರಾನ್ ತಾಹಿರ್ ಎಸೆತಕ್ಕೆ ಔಟ್ ಆದರು. ಬಳಿಕ ವಿಕೆಟ್ ಗಳ ಪತನ ಪ್ರಾರಂಭವಾಗಿದ್ದು, ಕೊನೆಗೆ ಮನ್ ದೀಪ್ ಸಿಂಗ್(32) ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಕಾರಿಯಾದರು. ಎರಡು ವಿಕೆಟ್ ಪಡೆದ ಇಮ್ರಾನ್ ತಾಹಿರ್ ಹಾಗೂ ಡಿಜೆ ಬ್ರಾವೋ ಬೌಲಿಂಗ್ ನಲ್ಲಿ ಮಿಂಚಿದರು.
ಬಳಿಕ ಬ್ಯಾಟಿಂಗ್ ಗೆ ಆಗಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಘಾತಕ್ಕೆ ಒಳಗಾಯಿತು. ವಾಟ್ಸನ್ ಬಹುಬೇಗನೇ ನಿರ್ಗಮಿಸಿದರು. ಸದ್ಯ ಉತ್ತಮ ಫಾರ್ಮ್ ನಲ್ಲಿರುವ ಅಂಬಾಟಿ ರಾಯುಡು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ರವೀಂದ್ರ ಜಡೇಜ ಹಾಗೂ ಸುರೇಶ್ ರೈನಾ ಬೇಗನೇ ನಿರ್ಗಮಿಸಿದ್ದು, ನಾಯಕನಾಟವಾಡಿದ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 70 ರನ್ ದಾಖಲಿಸಿದರು. ಮಹೇಂದ್ರ ಸಿಂಗ್ ಧೋನಿ(70) ಹಾಗೂ ಅಂಬಾಟಿ ರಾಯುಡು(82) ಉತ್ತಮ ಜೊತೆಯಾಟ ದಾಖಲಿಸಿದ್ದು ಚೈನ್ನೈ ತಂಡಕ್ಕೆ ವರದಾನವಾಯಿತು. ರೋಚಕ ಪಂದ್ಯದಲ್ಲಿ ಕೊನೆಗೆ ಚೆನ್ನೈ ತಂಡವು ಗೆಲುವು ದಾಖಲಿಸಿತು.