ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೇರಳ ಮಲಪ್ಪುರಂನ ವೇಗದ ಬೌಲರ್ ಕೆ.ಎಂ ಆಸೀಫ್: ಇವರ ಹಿನ್ನೆಲೆಯೇನು?

ನ್ಯೂಸ್ ಕನ್ನಡ ವರದಿ-(30.04.18): ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಪುಣೆಯಲ್ಲಿ ನಡೆಯುತ್ತಿದೆ. ಈ ಪಂದ್ಯಾಟದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ಪರ ಬೌಲಿಂಗ್ ಮಾಡಿದ ಕೆ.ಎಮ್ ಆಸಿಫ್ ಎಂಬ ಆಟಗಾರ ಹಲವರ ಗಮನ ಸೆಳೆದಿದ್ದಾರೆ. ತನ್ನ ಜೀವನದ ಪ್ರಪ್ರಥಮ ಐಪಿಎಲ್ ಪಂದ್ಯಾಟವನ್ನು ಆಸಿಫ್ ಇಂದು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆಡುತ್ತಿದ್ದು, ಈಗಾಗಲೇ 3 ಓವರ್ ಗಳಲ್ಲಿ 2 ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದಿದ್ದಾರೆ.

ಫುಟ್ಬಾಲ್ ನ ಭದ್ರಕೋಟೆಯಾಗಿರುವ ಕೇರಳದ ಮಲಪ್ಪುರಂನಲ್ಲಿ ಹುಟ್ಟಿದ ಮುಹಮ್ಮದ್ ಆಸೀಫ್ ಬಾಲ್ಯದಿಂದಲೇ ಫುಟ್ಬಾಲ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸುಮಾರು 10ನೇ ತರಗತಿಯವರೆಗೆ ಫುಟ್ಬಾಲ್ ನಲ್ಲಿ ಗಮನ ಕೇಂದ್ರೀಕರಿಸಿದ್ದ ಆಸೀಫ್ ರವರು ಬಳಿಕ ಕ್ರಿಕೆಟ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ಕೇರಳ ರಾಜ್ಯವನ್ನು ಪ್ರತಿನಿಧಿಸಿದ್ದ ಆಸೀಫ್ ರ ಪ್ರದರ್ಶನವನ್ನು ಕಂಡು ಚೆನ್ನೈ ಸೂಪರ್ ಕಿಂಗ್ಸ್ ಮೂಲಬೆಲೆಗಿಂತ ದುಪ್ಪಟ್ಟು ಹಣ ನೀಡಿ ಖರೀದಿಸಿದರು.

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಲ್ ಆದ ಕುರಿತು ಅವರನ್ನು ಪ್ರಶ್ನಿಸಿದಾಗ, ನೂರಕ್ಕೂ ಹೆಚ್ಚು ಆಟಗಾರರು ಖರೀದಿಯ ಪಟ್ಟಿಯಲ್ಲಿದ್ದರು. ನನ್ನ ಸಂಖ್ಯೆಯು 266 ಆಗಿತ್ತು. ನನಗೆ ಹೆಚ್ಚಿನ ಭರವಸೆ ಏನೂ ಇರಲಿಲ್ಲ. ಪಂದ್ಯವೊಂದನ್ನು ಆಡುತ್ತಿದ್ದ ವೇಳೆ ನನ್ನ ಸಹ ಆಟಗಾರ ಬಂದು ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾದ ಕುರಿತು ತಿಳಿಸಿದಾಗ ನನಗೆ ಸಂಭ್ರಮದಿಂದ ಮಾತೇ ಬರಲಿಲ್ಲ. ಇದು ಎಲ್ಲಾ ಕ್ರಿಕೆಟ್ ಆಟಗಾರರ ಕನಸಾಗಿರುತ್ತದೆ. ನಾನು ಉತ್ತಮ ಪ್ರದರ್ಶನ ನೀಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಆಸೀಫ್ ಹೇಳಿದ್ದಾರೆ.

Leave a Reply

Your email address will not be published. Required fields are marked *