38 ಕ್ರಿಮಿನಲ್ ಕೇಸ್ ಇರುವ ಬಿಎಸ್‍ವೈ ರಾಜ್ಯದ ಮುಖ್ಯಮಂತ್ರಿ ಆಗಬೇಕೇ?: ಸುರ್ಜೆವಾಲಾ ಪ್ರಶ್ನೆ

ನ್ಯೂಸ್ ಕನ್ನಡ ವರದಿ : ಪ್ರೆಸ್‌ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಇಂದು ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಭಾಗವಹಿಸಿ ಮಾತನಾಡಿದ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲಾರವರು ಭ್ರಷ್ಟಚಾರವೆಸಗಿದ್ದ ಹತ್ತು ಜನರಿಗೆ ಬಿಜೆಪಿ ಟಕೆಟ್ ನೀಡಿದೆ. ಕರ್ನಾಟಕದ ಚುನಾವಣೆಗೆ ಪ್ರಚಾರಕ್ಕೆಂದು ಆಗಮಿಸಿರುವ ಮೋದಿ ಅವರು ಸಾಕಷ್ಟು ಬಾರಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುತ್ತಾರೆ. ಇದೇ ರೀತಿ ಕರ್ನಾಟಕದ ಬಿಜೆಪಿ ನಾಯಕರ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ. ಅವರ ಮೇಲೆ ಭ್ರಷ್ಟಾಚಾರ, ವಂಚನೆ ಸೇರಿದಂತೆ ವಿವಿಧ ಆರೋಪಗಳಿವೆ. 24 ಪ್ರಕರಣಗಳು ದಾಖಲಾಗಿದ್ದು, ವಿಚಾರಣಾ ಹಂತದಲ್ಲಿವೆ. ಸುಪ್ರೀಂಕೋರ್ಟ್‌ನಲ್ಲಿ 15 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಟ್ಟು 38 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ, ರಾಜ್ಯದ ಮುಖ್ಯಮಂತ್ರಿ ಆಗಬೇಕೆ ಎಂದು ಪ್ರಶ್ನಿಸಿದರು. ಇವರಲ್ಲದೆ ಬಿಜೆಪಿ ಮುಂಚೂಣಿಗೆ ಬಿಟ್ಟಿರುವ 10 ಮಂದಿ ನಾಯಕರ ಮೇಲೂ ಕ್ರಿಮಿನಲ್ ಕೇಸುಗಳಿವೆ. ಬದಾಮಿ ಹಾಗೂ ಮೊಣಕಾಲ್ಮೂರು ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಮೇಲೆ 3, ಜನಾರ್ದನರೆಡ್ಡಿ ಸಹೋದರ ಸೋಮಶೇಖರರೆಡ್ಡಿ ಮೇಲೆ 5 ಕ್ರಿಮಿನಲ್ ಪ್ರಕರಣ, ಶ್ರೀರಾಮಲು ಸಂಬಂಧಿ ಸುರೇಶ್ ಬಾಬು ಮೇಲೆ 6 ಕ್ರಿಮಿನಲ್ ಕೇಸುಗಳಿವೆ. ಇನ್ನು ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮೇಲೆ 4, ಸಿ.ಟಿ. ರವಿ ಮೇಲೆ 3, ಮುರುಗೇಶ್ ನಿರಾಣಿ ಮೇಲೆ 2, ಕೃಷ್ಣಯ್ಯ ಶೆಟ್ಟಿ ಮೇಲೆ 4, ಶೀವನಗೌಡ ನಾಯಕ್ ಮೇಲೆ 4, ಮಾಜಿ ಡಿಸಿಎಂ ಆರ್. ಅಶೋಕ್ ಮೇಲೆ 2, ಸಂಸದೆ ಶೋಭಾ ಕರಂದ್ಲಾಜೆ ಮೇಲೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ 1 ಪ್ರಕರಣ ದಾಖಲಾಗಿದೆ.

ಇಷ್ಟೇ ಅಲ್ಲದೆ ಸುಮಾರು 35 ಸಾವಿರ ಕೋಟಿ ರೂಪಾಯಿಗಳ ಗಣಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗಾಲಿ ಜನಾರ್ದನ ರೆಡ್ಡಿಗೆ ಕ್ಲೀನ್ ಚಿಟ್ ನೀಡಲು ಸಿಬಿಐ ಹಗಲು-ರಾತ್ರಿ ಶ್ರಮಿಸಿದೆ. ಕೊನೆಗೆ ಸಿಬಿಐ ಗೋವಾ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ಕಡೆ ದಾಖಲಾಗಿದ್ದ 6 ಪ್ರಮುಖ ಪ್ರಕರಣಗಳನ್ನು ಸಿಬಿಐ ಕೈಬಿಟ್ಟಿದೆ ಎಂದು ದೂರಿದರು. ಹಾಗೂ ಇದೇ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಕುರಿತ ವಿಡಿಯೋ ಕೂಡ ಬಿಡುಗಡೆ ಮಾಡಲಾಯಿತು.

Leave a Reply

Your email address will not be published. Required fields are marked *