ಲಂಡನ್ ನಿಂದ ದೆಹಲಿಗೆ ಈಕೆ ಯಾರ ಪಾಸ್ಪೋರ್ಟ್ ತೋರಿಸಿ ವಿಮಾನದಲ್ಲಿ ಪ್ರಯಾಣಿಸಿದ್ದು ಗೊತ್ತೇ?

ನ್ಯೂಸ್ ಕನ್ನಡ ವರದಿ: ತಪಾಸಣೆಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ನೋಡಿದರೆ ಅತ್ಯಂತ ಹೆಚ್ಚು ಭದ್ರತಾ ವ್ಯವಸ್ಥೆ ಮತ್ತು ತಪಾಸಣೆ ಇರುವ ಸ್ಥಳಗಳಲ್ಲಿ ವಿಮಾನ ನಿಲ್ದಾಣವು ಅಗ್ರಸ್ಥಾನದಲ್ಲಿ ಬರುವುದು. ಆದರೆ ಲಂಡನ್ ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಭಾರತೀಯ ಮೂಲದ ಉದ್ಯಮಿ ಮಹಿಳೆಯೊಬ್ಬರು ತಮ್ಮ ಪಾಸ್ಪೋರ್ಟ್ ಮನೆಯಲ್ಲೇ ಮರೆತು ಗಂಡನ ಪಾಸ್ಪೋರ್ಟ್ ತೋರಿಸಿ ಪ್ರಯಾಣ ಬೆಳೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಹೌದು ನೀವು ನಂಬಲೇಬೇಕು. ಲಂಡನ್ ನಿಂದ 55ರ ಹರೆಯದ ಮಹಿಳೆ ಗೀತ ಮೋದ ತನ್ನ ಪಾಸ್ಪೋರ್ಟ್ ಮರೆತು ಬದಲಿಗೆ ಗಂಡನ ಪಾಸ್ಪೋರ್ಟ್ ತೋರಿಸಿದಾಗ ತಪಾಸಣಾ ಅಧಿಕಾರಿಗಳು, ಇಮಿಗ್ರೇಷನ್ ಅಧಿಕಾರಿಗಳು ಸರಿಯಾಗಿ ತಪಾಸಣೆ ನಡೆಸದೆ ಅವರಿಗೆ ಪ್ರಯಾಣಿಸಲು ಅವಕಾಶ ನೀಡಿದ್ದು, ಲಂಡನ್ ನಿಂದ ದೆಹಲಿಗೆ ಪ್ರಯಾಣದ ವಿಮಾನ ದುಬೈ ಮೂಲಕ ದೇಶದ ರಾಜಧಾನಿ ತಲುಪಿತ್ತು.

ಆದರೆ ದೆಹಲಿ ತಲುಪಿದ ಕೂಡಲೇ ದೆಹಲಿಯ ಇಮಿಗ್ರೇಷನ್ ಅಧಿಕಾರಿಗಳು ಈ ಬಹುದೊಡ್ಡ ಅಚಾತುರ್ಯ ಕಂಡು ದಂಗಾಗಿದ್ದಾರೆ. ಅವರು ಗೀತ ಮೋದ ತನ್ನ ಪಾಸ್ಪೋರ್ಟ್ ಹೊಂದಿರದ ಕಾರಣ ಭಾರತಕ್ಕೆ ಪ್ರವೇಶ ನಿರಾಕರಣೆ ಮಾಡುತ್ತಾರೆ ಮತ್ತು ಅವರನ್ನು ದುಬೈ ವಿಮಾನ ನಿಲ್ದಾಣಕ್ಕೆ ವಾಪಾಸ್ ಕಳುಹಿಸುತ್ತಾರೆ.

ದುಬೈ ಮೂಲದ ಎಮಿರೇಟ್ಸ್ ಏರ್ ಲೈನ್ಸ್ ಮೂಲಕ ಗಂಡನ ಪಾಸ್ಪೋರ್ಟ್ ನಲ್ಲಿ ಪ್ರಯಾಣ ಬೆಳೆಸಿದ ಈ ಘಟನೆಯಲ್ಲಿ ಹಲವು ಭದ್ರತಾ ಅಧಿಕಾರಿಗಳ ಕರ್ತವ್ಯ ಲೋಪ ಕಂಡುಬಂದಿದ್ದು ಇದೀಗ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ವಿಮಾನದ ಸಿಬ್ಬಂದಿಗಳ ವಿರುದ್ಧ ಕಿಡಿಕಾರಿರುವ ಗೀತ ಮೋದ ನೀವು ಸರಿಯಾಗಿ ಪರೀಕ್ಷೆ ನಡೆಸದೇ ಗಂಡನ ಪಾಸ್ಪೋರ್ಟ್ ನೊಂದಿಗೆ ನನಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟು ಇದೀಗ ಇಷ್ಟೆಲ್ಲ ತೊಂದರೆ ಅನುಭವಿಸುವ ಸ್ಥಿತಿ ಬಂದಿದೆ ಎಂದಿದ್ದಾರೆ. ಇದೀಗ ಗೀತ ಲಂಡನ್ ನಿಂದ ವಿಮಾನದ ಮೂಲಕ ದುಬೈ ತಲುಪಲಿರುವ ತನ್ನ ನಿಜವಾದ ಪಾಸ್ಪೋರ್ಟ್ ಗಾಗಿ ದುಬೈ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *