ಈ ಜಿಲ್ಲಾಧಿಕಾರಿ ತನ್ನ ಕಾರು ಚಾಲಕನನ್ನು ಹೇಗೆ ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟಿದ್ದು ಗೊತ್ತೇ?

ನ್ಯೂಸ್ ಕನ್ನಡ ವರದಿ: ತಮಿಳುನಾಡಿನ ಕರೂರು ಜಿಲ್ಲಾಧಿಕಾರಿ ಕಾರು ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಕೆ. ಪರಮಶಿವಂ ಅವರಿಗೆ ಅವರ ಬಾಸ್ ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ಬೀಳ್ಕೊಡುಗೆ ನೀಡಿದ್ದಾರೆ. ಕಳೆದ 35 ವರ್ಷಗಳಿಂದ ಹಲವು ಜಿಲ್ಲಾಧಿಕಾರಿಗಳನ್ನು ಕಚೇರಿಯಿಂದ ಮನೆಗೆ ಬಿಡುತ್ತಿದ್ದ ಪರಮಶಿವಂ ಅವರ ನಿವೃತ್ತಿ ದಿನ ಜಿಲ್ಲಾಧಿಕಾರಿಯೇ ಸ್ವತಃ ಕಾರು ಚಾಲನೆ ಮಾಡಿ ಚಾಲಕ ಮತ್ತವರ ಪತ್ನಿಯನ್ನು ಮನೆಗೆ ಬಿಡುವ ಮೂಲಕ ವಿಶೇಷವಾಗಿ ಬೀಳ್ಕೊಡುಗೆ ನೀಡಿದ್ದಾರೆ.

ಕಳೆದ ಮಂಗಳವಾರ ಪರಮಶಿವಂ ಅವರ ಕರ್ತವ್ಯದ ಕೊನೆಯ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಪತ್ನಿಯೊಂದಿಗೆ ಬಂದಿದ್ದರು. ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾಧಿಕಾರಿ ಟಿ. ಅನ್ಬಳಗನ್ ಅವರು, ತಾವು ಖುದ್ದು ಕಾರು ಚಾಲಕನಾಗಿ ಡ್ರೈವಿಂಗ್‌ ಸೀಟ್‌ ಮೇಲೆ ಕುಳಿತು, ಪರಮಶಿವಂ ಹಾಗೂ ಅವರ ಪತ್ನಿಯನ್ನು ಕಾರಿನ ಹಿಂಬದಿ ತಮ್ಮ ಸೀಟಿನಲ್ಲಿ ಕುರಿಸಿ, ಕಚೇರಿಯಿಂದ ಐದು ಕಿಲೋ ಮೀಟರ್ ದೂರದಲ್ಲಿದ್ದ ಅವರ ಮನೆಗೆ 10 ನಿಮಿಷದಲ್ಲಿ ಕರೆದೊಯ್ದರು.

ಪರಮಶಿವಂ ಮನೆಯಲ್ಲಿ ಕುಟುಂಬ ಸದಸ್ಯರು ಏರ್ಪಡಿಸಿದ್ದ ಕೇಕ್ ಕತ್ತರಿಸುವ ಸಮಾರಂಭದಲ್ಲಿ ಭಾಗವಹಿಸಿ ಕೆಲ ಹೊತ್ತು ಕಾಲ ಕಳೆದರು. ಜಿಲ್ಲಾಧಿಕಾರಿ ಕೂರುವ ಕಾರಿನ ಸೀಟಿನಲ್ಲಿ ನನಗೆ ಕುಳಿತುಕೊಳ್ಳಲು ಹೇಳಿದಾಗ ಆಶ್ಚರ್ಯವಾಯಿತು. ಅವರೊಬ್ಬ ಒಳ್ಳೆಯ ಮನುಷ್ಯ, ಅವರೊಂದಿಗೆ ಕೆಲಸ ಮಾಡಿದ ದಿನಗಳು ಮತ್ತು ನನಗೆ ವಿಶೇಷವಾಗಿ ನೀಡಿದ ಬೀಳ್ಕೊಡುಗೆಯ ಈ ಕ್ಷಣವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ನಿವೃತ್ತ ಚಾಲಕ ಪರಮಶಿವಂ ಅವರು ಸಂತಸ ಹಂಚಿಕೊಂಡರು.

Leave a Reply

Your email address will not be published. Required fields are marked *