ಮದುವೆಯ ಉಂಗುರವನ್ನೇ ಪತಿಯನ್ನು ಕೊಲ್ಲಲು ಸುಪಾರಿಯಾಗಿ ನೀಡಿದ ಪತ್ನಿ! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಒಲ್ಲದ ಮನಸ್ಸಿನಿಂದ ಮದುವೆಯಾದ ಯುವತಿಯೊಬ್ಬಳು ಪ್ರಿಯಕರನ ಜತೆಗೂಡಿ ಹತ್ತು ದಿನಗಳ ತನ್ನನ್ನು ವರಿಸಿದ್ದ ಯುವಕನನ್ನೇ ಹತ್ಯೆ ಮಾಡಿಸಿದ್ದಾಳೆ. ಇದಕ್ಕಾಗಿ ಆಕೆ ಮದುವೆಗಾಗಿ ನೀಡಿದ್ದ ಉಂಗುರವನ್ನೇ ಸುಪಾರಿಯಾಗಿ ನೀಡಿದ್ದಳು. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಚಿಲಿತಲಪುಡಿವಾಸಲ ಗ್ರಾಮದ ಗೌರಿ ಶಂಕರರಾವ್‌ ಮೃತ ವ್ಯಕ್ತಿ.

ಇದೇ ಜಿಲ್ಲೆಯ ವೀರಗಟ್ಲಂ ಮಂಡಲದ ಕಡೆಕಲ್ಲಾ ಗ್ರಾಮದ ಸರಸ್ವತಿ ಎಂಬುವಳು ತನ್ನ ಗಂಡನನ್ನೇ ಹತ್ಯೆ ಮಾಡಿಸಿದ್ದಾಳೆ. ಏಪ್ರಿಲ್‌ 28ರಂದು ಗೌರಿ ಶಂಕರ್‌ ರಾವ್‌ ಹಾಗೂ ಸರಸ್ವತಿ ವಿವಾಹ ನಡೆದಿತ್ತು. ಇದಕ್ಕೆ ಸರಸ್ವತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಆದರೆ ಮನೆಯವರು ಬಲವಂತವಾಗಿ ಮದುವೆ ಮಾಡಿಸಿದ್ದರು.

ಆದರೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಶಿವ ಎಂಬುವನನ್ನು ಸರಸ್ವತಿ ಪ್ರೀತಿಸುತ್ತಿದ್ದಳು. ಮದುವೆಯಾದ ಕೂಡಲೇ ತನ್ನ ಪ್ರಿಯಕರನ ಜತೆಗೂಡಿ ಪತಿಯ ಹತ್ಯೆಗೆ ಸ್ಕೆಚ್‌ ಹಾಕಿದಳು. ಇದಕ್ಕೆ ತನ್ನ ಮದುವೆಯ ಉಂಗುರವನ್ನೇ ಸುಪಾರಿಯಾಗಿ ನೀಡಿದಳು. ಶಿವ ಹಾಗೂ ಸರಸ್ವತಿ ಮತ್ತಿಬ್ಬರ ಜತೆಗೂಡಿ ಗೌರಿಶಂಕರನನ್ನು ಹತ್ಯೆ ಮಾಡಿದ್ದಾರೆ. ಶಾಪಿಂಗ್‌ಗೆ ಹೋಗುವ ನೆಪದಲ್ಲಿ ಗಂಡನ ಜತೆ ಆಟೋವೊಂದರಲ್ಲಿ ಸರಸ್ವತಿ ತೆರಳಿದ್ದಳು. ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ಸರಸ್ವತಿ ತನ್ನ ಪ್ರಿಯಕರನಿಗೆ ಮಾಹಿತಿ ನೀಡಿದ್ದಾಳೆ. ಶಿವ, ಆಟೋ ಚಾಲಕ ಮತ್ತು ಮತ್ತೊಬ್ಬ ರೌಡಿ ಗೋಪಿ ಎಂಬಾತ ಕಬ್ಬಿಣದ ಸಲಾಕೆಗಳಿಂದ ಗೌರಿಶಂಕರ ರಾವ್‌ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ತನ್ನ ಆಭರಣಗಳನ್ನು ಬಚ್ಚಿಟ್ಟಿದ್ದ ಸರಸ್ವತಿ, ಕೆಲವು ಗೂಂಡಾಗಳು ಬಂದು ಪತಿಯ ಮೇಲೆ ಹಲ್ಲೆ ನಡೆಸಿ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ನಾಟಕವಾಡಿ ಪೊಲೀಸರಿಗೆ ದೂರು ಸಲ್ಲಿಸಿದಳು. ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರಬಿತ್ತು. ಸರಸ್ವತಿ ಮತ್ತು ಶಿವ ನಡುವಿನ ದೂರವಾಣಿ ಸಂಭಾಷಣೆಯ ಮಾಹಿತಿ ಕಲೆ ಹಾಕಿದ ಪೊಲೀಸರು ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಇಬ್ಬರೂ ಈಗ ಪೊಲೀಸ್‌ ವಶದಲ್ಲಿದ್ದಾರೆ.

Leave a Reply

Your email address will not be published. Required fields are marked *