ಐಪಿಎಲ್ನಲ್ಲಿ ಟಾಪ್ 3ನಲ್ಲಿದ್ದರೂ ಪಂಜಾಬ್ ಮೆಂಟರ್ ಸ್ಥಾನಕ್ಕೆ ಸೆಹ್ವಾಗ್ ಗುಡ್ ಬೈ? ಏಕೆ ಗೊತ್ತೇ?
ನ್ಯೂಸ್ ಕನ್ನಡ ವರದಿ: ಪ್ರತಿ ಬಾರಿಯೂ ನಿರಾಶಾದಾಯಕ ಪ್ರದರ್ಶನ ನೀಡಿ ಅಭಿಮಾನಿಗಳ ಮನನೋಯಿಸುತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿ ತಂಡದ ಆಯ್ಕೆಯಲ್ಲಿ ಮಾಡಿದ ಹಲವಾರು ಅಚ್ಚರಿಯ ಬದಲಾವಣೆ ನಂತರ ಅತ್ಯುತ್ತಮ ಲಯವನ್ನು ಕಂಡುಕೊಂಡು ಕನ್ನಡಿಗರಾದ ಕೆ.ಎಲ್ ರಾಹುಲ್, ಕರಣ್ ನಾಯರ್ ಅದೇ ರೀತಿ ದೈತ್ಯ ಕ್ರಿಸ್ ಗೇಲ್ ಅಬ್ಬರದ ಪ್ರದರ್ಶನದಿಂದಾಗಿ ಪ್ಲೇ ಆಫ್ ಹಂತಕ್ಕೆ ತಲುಪಲು ತಯಾರಿ ನಡೆಸಿತ್ತು. ವಿರೇಂದ್ರ ಸೆಹ್ವಾಗ್ ನಡೆಸಿದ ಹೊಸ ಪ್ರಯೋಗಗಳು ಕ್ಲಿಕ್ ಆಗಿದ್ದವು, ಎಲ್ಲರೂ ಅವರ ಈ ಹೊಸ ಜವಾಬ್ದಾರಿಯನ್ನು ಪ್ರಶಂಸಿಸಿದ್ದರು. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ಮುಗ್ಗರಿಸಿದ ಬೆನ್ನಲ್ಲೇ ಪಂಜಾಬ್ ಸಹ ಒಡತಿ ಪ್ರೀತಿ ಜಿಂಟಾ ತಂಡದ ಮೆಂಟರ್ ಸೆಹ್ವಾಗ್’ರನ್ನು ನಿಂದಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ತಮ್ಮ ಮೆಂಟರ್ ಸ್ಥಾನಕ್ಕೆ ರಾಜೀನಾಮೆ ನೀಡಲು ಸೆಹ್ವಾಗ್ ತಯಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಸ್ಥಾನ ರಾಯಲ್ಸ್ ನೀಡಿದ್ದ 158 ರನ್’ಗಳ ಸುಲಭ ಗುರಿ ಬೆನ್ನತ್ತಲು ಪಂಜಾಬ್ ವಿಫಲವಾಗಿತ್ತು. ಪ್ರೀತಿ ಜಿಂಟಾ, ನೆಸ್ ವಾಡಿಯಾ ಹಾಗೂ ಉಧ್ಯಮಿ ಮೋಹಿತ್ ಬುರ್ಮಾನ್ ಸಹ ಒಡೆತನದ ಪ್ರಾಂಚೈಸಿಯೊಂದಿಗೆ ಸೆಹ್ವಾಗ್ ತಂಡದ ಮೆಂಟರ್ ಆಗಿದ್ದ 5 ವರ್ಷಗಳ ಒಡನಾಟ ಈ ಆವೃತ್ತಿಯ ಬಳಿಕ ಕೊನೆಯಾಗಲಿದೆ ಎನ್ನಲಾಗುತ್ತಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಹಾಗೂ ಮನೋಜ್ ತಿವಾರಿ ಬದಲು ನಾಯಕ ಅಶ್ವಿನ್ ಅವರನ್ನು ಬ್ಯಾಟಿಂಗ್’ಗೆ ಕಳಿಸಿದ್ದರು. ಆದರೆ ಅಶ್ವಿನ್ ಶೂನ್ಯ ಸುತ್ತಿ ಪೆವಿಲಿಯನ್’ಗೆ ಮರಳಿದ್ದರು. ಪ್ರಸ್ತುತ ಕಿಂಗ್ಸ್ ಇಲೆವನ್ ಪಂಜಾಬ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಸರಿಯಾದ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲವಾಗಿದ್ದೀರ ಎಂದು ಪ್ರೀತಿ ಕೂಗಾಡುವಾಗ ಆದಷ್ಟು ಸಮಾಧಾನವಾಗಿಯೇ ವರ್ತಿಸಿದ ಸೆಹ್ವಾಗ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದೀಗ ಸೆಹ್ವಾಗ್ ಮುಂದಿನ ನಡೆ ಕುತೂಹಲ ಮೂಡಿಸಿದೆ.