ಕಾಂಗ್ರೆಸ್ ಸಂಸದರ ನಡವಳಿಕೆ ಖಂಡಿಸಿ ಬಿಜೆಪಿ ಮತ್ತು ಎನ್’ಡಿಎ ಸಂಸದರಿಂದ ಉಪವಾಸ ಸತ್ಯಾಗ್ರಹ!

ನ್ಯೂಸ್ ಕನ್ನಡ ವರದಿ-(08.04.18): ಸಂಸತ್‌ ಕಲಾಪ ನಡೆಯಲು ಬಿಡದ ಕಾಂಗ್ರೆಸ್‌ ಸಂಸದರ ನಡವಳಿಕೆ ಖಂಡಿಸಿ ಏ.12ರಂದು ದೇಶಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಸಂಸದರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ಹೇಳಿದ್ದಾರೆ.

ಯಲಹಂಕ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ಮೇಲಿನ ಚರ್ಚೆಗೆ ಕಾಂಗ್ರೆಸ್‌ ಅವಕಾಶ ಮಾಡಿಕೊಟ್ಟಿಲ್ಲ . 23 ದಿನದ ಸಂಸತ್‌ ಅಧಿವೇಶನ ವ್ಯರ್ಥವಾಗಿದೆ. ಇದಕ್ಕೆ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರೇ ನೇರ ಹೊಣೆ. ಈ ಧೋರಣೆ ಖಂಡಿಸಿ ಏ.12ರಂದು ದೇಶಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಸಂಸದರು ಜಿಲ್ಲಾ ಅಥವಾ ತಾಲೂಕು ಕೇಂದ್ರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್‌ಡಿಎಗೆ ಪೂರ್ಣ ಜನಾದೇಶ ಸಿಕ್ಕಿರುವುದಕ್ಕೆ ಕಾಂಗ್ರೆಸ್‌ಗೆ ಅಸಹನೆ ಇದೆ. 48 ವರ್ಷದ ಕುಟುಂಬ ರಾಜಕಾರಣ ಹಾಗೂ 55 ವರ್ಷದ ಕಾಂಗ್ರೆಸ್‌ ಆಡಳಿತ ಕೊನೆಯಾಗಿರುವುದರಿಂದ ಕಾಂಗ್ರೆಸ್‌ ಹತಾಶಗೊಂಡಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇಲ್ಲ. ಕಾಂಗ್ರೆಸ್‌ ಸ್ವಭಾವ ಹಾಗೂ ಸಂಸ್ಕೃತಿಯಲ್ಲಿ ಪ್ರಜಾತಂತ್ರ ವಿರೋಧಿ ಧೋರಣೆ ಹೊಂದಿದೆ. 21 ರಾಜ್ಯಗಳಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್‌ ಸಂಸದರು ನಕಾರಾತ್ಮಕ ರಾಜಕಾರಣದ ಮೂಲಕ ಲೋಕತಂತ್ರ ಮತ್ತು ಪ್ರಜಾತಂತ್ರ ವ್ಯವಸ್ಥೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು

Leave a Reply

Your email address will not be published. Required fields are marked *