ಭಾರತೀಯರ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಕ್ಷಮೆ ಕೋರಿದ ಪ್ರಿಯಾಂಕ ಚೋಪ್ರಾ!
ನ್ಯೂಸ್ ಕನ್ನಡ ವರದಿ: ಕ್ವಾಂಟಿಕೋ ವಿವಾದಿತ ಎಪಿಸೋಡ್ ಸಂಬಂಧ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಭಾರತೀಯರ ಕ್ಷಮೆ ಕೋರಿದ್ದಾರೆ. ತಮ್ಮ ಕ್ವಾಂಟಿಕೋ ಸಿನಿಮಾದಲ್ಲಿ ಭಾರತೀಯತೆ ಹಾಗು ರಾಷ್ಟ್ರೀಯತೆಗೆ ಧಕ್ಕೆ ಬರುವ ರೀತಿಯಲ್ಲಿ ಸಿನಿಮಾದಲ್ಲಿ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೊನೆಗೂ ಕ್ಷಮೆಯಾಚಿಸಿದ್ದಾರೆ.
‘ಕ್ವಾಂಟಿಕೋದ ಅವತರಣಿಕೆಯೊಂದರಲ್ಲಿ ಜನತೆಯ ಭಾವನೆಗಳಿಗೆ ನೋವಾಗುವ ರೀತಿಯಲ್ಲಿ ಕೆಲ ಅವತರಣಿಕೆಗಳು ಮೂಡಿಬಂದಿವೆ. ಆದು ಕೇವಲ ನಿರ್ದೇಶಕರ ಕಲ್ಪನೆಯಾಗಿತ್ತು. ಇದರ ಹಿಂದೆ ನನ್ನ ಪಾತ್ರವಿಲ್ಲ. ಆದರೂ ಈ ವಿಚಾರವಾಗಿ ಕ್ಷಮೆಕೋರುವೆ. ನಾನು ಹೆಮ್ಮಯ ಭಾರತೀಯಳು ಹಾಗು ಅದೆಂದೂ ಬದಲಾಗದು’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
ಜೂನ್ 1ರಂದು ಬಿತ್ತರವಾದ ಕ್ವಾಂಟಿಕೋ ಅವತರಣಿಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಕೇಳಿಬಂದಿತ್ತು. ಭಾರತೀಯಳಾಗಿ ಪ್ರಿಯಾಂಕಾ ಇಂಥ ವಿವಾದಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳಲು ಒಪ್ಪಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಮೂಡಿ ಬಂದಿದ್ದವು.
ಅಧಿಕೃತವಾಗಿ ಕ್ಷಮೆ ಕೋರಿದ ಎಬಿಸಿ:
ಇನ್ನು ಇದೇ ವಿಚಾರವಾಗಿ ಕ್ವಾಂಟಿಕೋ ನಿರ್ಮಾಣ ಸಂಸ್ಥೆ ಎಬಿಸಿ ಸ್ಟುಡಿಯೋಸ್ ಕೂಡ ಅಧಿಕೃತ ಹೇಳಿಕೆ ನೀಡಿ ಭಾರತೀಯರ ಕ್ಷಮೆಯಾಚಿಸಿದೆ. ಕ್ವಾಂಟಿಕೊ ಸರಣಿಯಲ್ಲಿ ಪ್ರಿಯಾಂಕ ಅವರು ಎಫ್ಬಿಐ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾನ್ಹಟನ್ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಭಾರತದ ರಾಷ್ಟ್ರೀಯವಾದಿಗಳು ಸಂಚು ರೂಪಿಸಿದ್ದರೂ ಇದಕ್ಕೆ ಪಾಕಿಸ್ತಾನ ಕಾರಣವೆನ್ನುತ್ತಿದ್ದಾರೆ ಎಂದು ಒಂದು ಸಂಚಿಕೆಯಲ್ಲಿ ತೋರಿಸಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಬಿದ್ದಿದ್ದ ರುದ್ರಾಕ್ಷಿಯಿಂದಾಗಿ ಪ್ರಿಯಾಂಕ ಅವರು ಆರೋಪಿಯನ್ನು ಪತ್ತೆಹಚ್ಚುವುದು ಕೂಡ ಕಥಾಭಾಗವಾಗಿತ್ತು. ‘ ಈ ಸಂಚಿಕೆಯನ್ನು ಪ್ರಿಯಾಂಕ ನಿರ್ಮಿಸಿಲ್ಲ, ಅಲ್ಲದೇ ಅವರು ಕಥೆ ಬರೆದಿಲ್ಲ ಅಥವಾ ನಿರ್ದೇಶನ ಮಾಡಿಲ್ಲ. ಅದೊಂದು ಕಾಲ್ಪನಿಕ ಕಥೆಯಾಗಿದ್ದು, ಯಾರಿಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರನ್ನು ಸಿಲುಕಿಸಲು ಭಾರತೀಯರು ಯತ್ನಿಸುತ್ತಿರುವಂತೆ ಅವತರಣಿಕೆಯಲ್ಲಿ ತೋರಿಸಲಾಗಿತ್ತು. ಅಲ್ಲದೇ ರುದ್ರಾಕ್ಷಿಯನ್ನು ಬಳಕೆ ಮಾಡಿದ ರೀತಿ ಹಿಂದೂಪರ ಸಂಘಟನೆಗಳಲ್ಲಿ ಸಾಕಷ್ಟು ಆಕ್ರೋಶ ಮೂಡಿಸಿತ್ತು.
I’m extremely saddened and sorry that some sentiments have been hurt by a recent episode of Quantico. That was not and would never be my intention. I sincerely apologise. I'm a proud Indian and that will never change.
— PRIYANKA (@priyankachopra) June 9, 2018
ಕೃಪೆ ಕನ್ನಡ ಪ್ರಭ