ದುಬೈ: ಅರಬ್ ನಾಗರಿಕರನ್ನೂ ಆಕರ್ಷಿಸುತ್ತಿರುವ ಕನ್ನಡ ಚಿತ್ರ ‘ಒಂದಲ್ಲ ಎರಡಲ್ಲ’!

ನ್ಯೂಸ್ ಕನ್ನಡ ವರದಿ: ಬಿಡುಗಡೆಯಾದ ದಿನದಿಂದ ಸಿನಿ ಪ್ರೇಕ್ಷಕರ ಹೃದಯ ಗೆದ್ದು ಧನಾತ್ಮಕ ಪ್ರತಿಕ್ರಿಯೆಯಿಂದ ಸುದ್ದಿಮಾಡಿದ್ದ ‘ಒಂದಲ್ಲ ಎರಡಲ್ಲ’ ಕನ್ನಡ ಸಿನಿಮಾವನ್ನು ವೀಕ್ಷಿಸಲು ಯುಎಇಯ ಕರ್ನಾಟಕ ಮೀಡಿಯ ಫೋರಂನ ತಂಡ ಥಿಯೇಟರಿಗೆ ಭೇಟಿ ನೀಡಿದಾಗ ಎಲ್ಲರಿಗೂ ಅಚ್ಚರಿ ಮೂಡಿಸುವ ರೀತಿಯಲ್ಲಿ ಎಲ್ಲರಿಗಿಂತಲೂ ಮುಂಚೆ ಆಸೀನರಾಗಿದ್ದರು ಅರಬಿ ಮಾತೃಭಾಷೆಯ ಯುಎಇಯ ಇಬ್ಬರು ಅರಬಿ ನಾಗರಿಕರು.

ದೊಡ್ಡ ಬಜೆಟ್‍ನ ‘ಹೆಬ್ಬುಲಿ’ ಚಿತ್ರ ನಿರ್ಮಿಸಿದ್ದ ಉಮಾಪತಿ ಗೌಡರು ಬಂಡವಾಳ ಹೂಡಿದ, ರಾಮ ರಾಮಾ ರೇ ನಿರ್ದೇಶಕ ಸತ್ಯಪ್ರಕಾಶ್‌ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ ‘ಒಂದಲ್ಲ ಎರಡಲ್ಲ’ ಕರ್ನಾಟಕದಲ್ಲಿ ಜನರ ಮನಗೆದ್ದಿದ್ದು, ಅದೇ ಕುತೂಹಲದಿಂದ ಅನಿವಾಸಿ ಕನ್ನಡಿಗರೂ ದುಬೈನಲ್ಲಿ ಚಿತ್ರ ಬಿಡುಗಡೆಯಾದ ಕೂಡಲೇ ಕುಟುಂಬ ಸಮೇತರಾಗಿ ಬಂದು ವೀಕ್ಷಿಸಿದ್ದಾರೆ. ನಾವೇನೋ ಕನ್ನಡಿಗರು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕನ್ನಡ ಸಿನಿಮಾವನ್ನು ವೀಕ್ಷಿಸಿ ಪ್ರೋತ್ಸಾಹಿಸಲು ಥಿಯೇಟರಿಗೆ ಬಂದಿದ್ದೇವೆ ಆದರೆ ಯಾವುದೇ ದೊಡ್ಡ ಸ್ಟಾರ್ ನಟ ನಟಿಯರು ನಟಿಸದ, ದುಬೈನಲ್ಲಿ ಯಾವುದೇ ಅಬ್ಬರದ ಪ್ರಚಾರವೂ ನಡೆಸದ ಈ ಒಂದಲ್ಲ ಎರಡಲ್ಲ ಸಿನಿಮಾ ವೀಕ್ಷಿಸಲು ಅರಬ್ ನಾಗರಿಕರು ಏಕೆ ಬಂದಿದ್ದರು ಎಂಬ ಕುತೂಹಲ ನಮ್ಮ ತಂಡಕ್ಕಿತ್ತು.

ಚಿತ್ರ ಮುಗಿದ ಕೂಡಲೇ, ಸಿನಿಮಾ ಥಿಯೇಟರಿನಲ್ಲಿಯೇ ಅವರನ್ನ ಭೇಟಿಯಾಗಿ, ಕನ್ನಡ ಮಾಧ್ಯಮದವರು ಎಂದು ನಮ್ಮನ್ನು ಪರಿಚಯಿಸಿ ನೀವು ಈ ಸಿನಿಮಾ ನೋಡಲು ಎಲ್ಲರಿಗಿಂತಲೂ ಮುಂಚೆ ಬಂದು ಕೂತು, ಇಷ್ಟು ಕುತೂಹಲದಿಂದ ವೀಕ್ಷಿಸಲು ಕಾರಣವೇನೆಂದು ಕೇಳಿದಾಗ, “ನಾವು ಯುಎಇಯಲ್ಲಿ ಬಿಡುಗಡೆಯಾಗುವ ಎಲ್ಲಾ ಉತ್ತಮ ಚಿತ್ರದ ಬಗ್ಗೆ ಮಾಹಿತಿ ಪಡೆದು, ವೀಕ್ಷಿಸಿ ವಿಮರ್ಶಿಸುತ್ತೇವೆ, ನಮಗೆ ಈ ಸಿನಿಮಾದ ನಿರ್ದೇಶನ ತುಂಬಾ ಚೆನ್ನಾಗಿದೆ ಎಂದು ಮಾಹಿತಿಯಿತ್ತು, ಹಾಗಾಗಿ ವೀಕ್ಷಿಸಲು ಬಂದಿದ್ದೆವು, ಆದರೆ ಸಿನಿಮಾ ನಿರ್ದೇಶಕ ಸತ್ಯ ಪ್ರಕಾಶ್ ಅಷ್ಟೇ ಅಲ್ಲ ಸಮೀರನ ಪಾತ್ರ ಮಾಡಿದ ಆ ಬಾಲಕನ ನಟನೆಯೂ ನಮ್ಮನ್ನು ಮಂತ್ರಮುಗ್ಧಗೊಳಿಸಿತು” ಎಂದರು.

“ಹಿಂದಿ, ತಮಿಳು, ಮಲಯಾಳಂ, ಕನ್ನಡ ಅರ್ಥವಾಗದಿದ್ದರೂ ಅರಬಿ ಭಾಷೆಯ ಸಬ್’ಟೈಟಲ್ ಓದಿ ಸಂಭಾಷಣೆ ಅರ್ಥಮಾಡಿಕೊಳ್ಳುವ ನಾವು ಈ ಸಿನಿಮಾದಲ್ಲಿ ನಟಿಸಿದ ಎಲ್ಲರ ಮುಗ್ಧ ನಟನೆಯನ್ನೇ ನೋಡಿ ಅವರ ಭಾವನೆಯನ್ನು, ನೀಡುತ್ತಿರುವ ಸಂದೇಶವನ್ನು ಅರ್ಥೈಸಿಕೊಂಡೆವು ಸಬ್’ಟೈಟಲ್ ನ ಅವಶ್ಯಕತೆಯೇ ನಮಗೆ ಬರಲಿಲ್ಲ” ಎಂದು ‘ಒಂದಲ್ಲ ಎರಡಲ್ಲ’ ಚಿತ್ರತಂಡದ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು ಮತ್ತು ಇನ್ನಷ್ಟು ಇಂತಹ ಉತ್ತಮ ಕನ್ನಡ ಸಿನಿಮಾಗಳು ಬರಲಿ ಎಂದು ಶುಭ ಹಾರೈಸಿದರು.

ಥಿಯೇಟರಿನಲ್ಲಿ ಚಿತ್ರದ ಕುರಿತು ಪ್ರತಿಕ್ರಿಯಿಸಿದ ದುಬೈ ಉದ್ಯಮಿ ಹಿದಾಯತ್, ‘ಪ್ರತಿ ವಿಷಯವನ್ನು ಕೋಮು ಬಣ್ಣದಿಂದ ನೋಡುವ ಜನರ ನಡುವೆಯೂ ಬಹುತೇಕ ಹಳ್ಳಿಗಳಲ್ಲಿ ಯಾವ ರೀತಿಯಲ್ಲಿ ಜಾತಿ ಧರ್ಮವನ್ನು ಮೀರಿ ಸೌಹಾರ್ದತೆಯಿದೆ ಎಂಬುದನ್ನು ತೋರಿಸಿ ನಾವು ಬಾಲ್ಯದಲ್ಲಿ ನೋಡಿದಂತಹ, ಈಗೀಗ ನಶಿಸಿಹೋಗುತ್ತಿರುವ ಅನ್ಯೋನ್ಯ ಸೌಹಾರ್ದತೆಯ ಹಳ್ಳಿ ಜನರ ಜೀವನದ ಭಾವನಾತ್ಮಕ ನಂಟಿನ ಸಾಮಾಜಿಕ ಸಂದೇಶವನ್ನು ಮನೋಜ್ಞ ಅಭಿನಯದ ಮೂಲಕ ‘ಒಂದಲ್ಲ ಎರಡಲ್ಲ’ ಚಿತ್ರತಂಡ ನೀಡಿದೆ. ಅತ್ಯುತ್ತಮ ನಿರ್ದೇಶನ, ಸರಳ ಮನಸ್ಪರ್ಶಿಸುವ ಮುಗ್ಧ ಕಥೆಯ ಚಿತ್ರ’ ಎಂದು ಪ್ರಶಂಸಿಸಿದರು.

‘ಒಂದಲ್ಲ ಎರಡಲ್ಲ’ ವೀಕ್ಷಿಸಲು ಬಂದ ಯುಎಇಯ ಬಸವ ಸಮಿತಿಯ ಮಾಜಿ ಅಧ್ಯಕ್ಷರಾದ ರುದ್ರಯ್ಯ ನವಲಿ ಹಿರೇಮಠ್ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ‘ನಿಷ್ಕಳಂಕ ಮನಸ್ಸಿನ ಸಾಮಾನ್ಯ ಹುಡುಗ ಸಮೀರ ಮತ್ತು ಆತನ ಕುಟುಂಬದ ಅತ್ಯಂತ ಪ್ರೀತಿಯ ದನದ ಬಗ್ಗೆ, ನೆಮ್ಮದಿ ಬದುಕಿಗೆ ಅತ್ಯವಶ್ಯಕವಾಗಿರುವ ಮುಗ್ಧತೆಯನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ, ಹುಲಿ ತರಹ ಆಕ್ರಮಣಕಾರಿ ಮನಸ್ಸಿನ ಜನರನ್ನು ಹಸುವಿನಂತಹ ಮುಗ್ಧ ಮನಸ್ಸು ಗೆಲ್ಲಬಹುದು ಎಂದು ತೋರಿಸಿದೆ, ಪ್ರತಿಯೊಬ್ಬ ಕನ್ನಡಿಗರೂ ತಪ್ಪದೇ ವೀಕ್ಷಿಸಬೇಕಾದ ಚಿತ್ರ’ ಎಂದು ಅಭಿಪ್ರಾಯ ಪಟ್ಟರು.

ಅಂತರಾಷ್ಟ್ರೀಯ ಕಂಪೆನಿಯ CEO ಆಗಿದ್ದರೂ ಭಾಷಾ ಪ್ರೇಮಿಯಾಗಿ, ದುಬೈನಲ್ಲಿ ನಡೆದ ದಿ ವಿಲನ್ ಆಡಿಯೋ ಲಾಂಚ್ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದ ನವೀದ್ ಮಾಗುಂಡಿಯವರು ಕುಟುಂಬ ಸಮೇತ ಚಿತ್ರ ವೀಕ್ಷಿಸಿದ ನಂತರ ಮಾತನಾಡಿ, ‘ನಮ್ಮ ಊರನ್ನು ಬಿಟ್ಟು ದುಬೈ ಎಂಬ ಮಾಯಾನಗರಿಯಲ್ಲಿ ದುಡಿಯುತ್ತಾ ವಾಸಿಸುತ್ತಿರುವ ನಮಗೆ ಹಳ್ಳಿಯ ಸೊಬಗನ್ನು ನಮ್ಮ ಬಾಲ್ಯದ ನೆನಪನ್ನು ಕಣ್ಣೆದುರಿಗೆ ತೋರಿಸಿದಂತಾಯಿತು ‘ಒಂದಲ್ಲ ಎರಡಲ್ಲ’ ಚಿತ್ರದ ದೃಶ್ಯಗಳು. ದುಬೈನಲ್ಲಿ ರಾಜಪ್ರಭುತ್ವ ಇದ್ದರೂ ಎಲ್ಲಾ ಧರ್ಮದ ಜನರು ಸ್ವಚ್ಛಂದವಾಗಿ ಸೌಹಾರ್ದತೆಯಿಂದ ಜೀವಿಸುತ್ತಿದ್ದಾರೆ, ಆದರೆ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದಲ್ಲಿ ವಿನಾಕಾರಣ ಕೋಮು ಸೌಹಾರ್ದ ಕದಡುವ ಪ್ರಯತ್ನ ನಿರಂತರ ನಡೆಯುತ್ತಿದೆ, ಆದರೂ ಹಳ್ಳಿಗಳಲ್ಲಿ ಈಗಲೂ ಯಾವ ರೀತಿ ಸಂಪ್ರದಾಯ, ಧರ್ಮ ಅವಶ್ಯಕತೆ, ಅನಿವಾರ್ಯತೆ, ಸನ್ನಿವೇಶ ಅಥವಾ ಸ್ವಾಥ೯ತೆಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುತ್ತಾರೆ
ಎಂದು “ಮರೆತು ಹೋದ ಚಿಕ್ಕ ಮತ್ತು ಮಹತ್ತರವಾದ ಸತ್ಯ” ವನ್ನು ಅತ್ಯಂತ ಸರಳ, ನೈಜವಾಗಿ ಮತ್ತು ಮನಮುಟ್ಟುವಂತೆ ನಿರ್ದೇಶಕರು ನಿರೂಪಿಸಿದ್ದಾರೆ’ ಎಂದು ವಿಶ್ಲೇಷಿಸಿದರು.

Leave a Reply

Your email address will not be published. Required fields are marked *