ದೀಪಾವಳಿ ಮತ್ತು ಈದ್ ಮಿಲಾದ್ ಪ್ರಯುಕ್ತ ಬಿ-ಹ್ಯೂಮನ್ ಹಾಗೂ ಹಿದಾಯ ಫೌಂಡೇಶನ್ ನಿಂದ ಮಾನವೀಯ ಸೇವೆ

ವಿಶೇಷ ವರದಿ: ಹನೀಫ್ ಪುತ್ತೂರು

ಎಲ್ಲಾ ಧರ್ಮಗಳು ಮಾನವ ಕಲ್ಯಾಣ ಬಯಸುತ್ತದೆ. ಮನುಷ್ಯರ ಸೇವೆಯಲ್ಲಿ ದೇವನ ತೃಪ್ತಿ ತಲುಪುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ.ಕಳೆದ ಮೂರು ದಿನಗಳಲ್ಲಿ ಬಿ-ಹ್ಯೂಮನ್ ಚಾರಿಟಿ ಸಂಸ್ಥೆ ಮತ್ತು ಹಿದಾಯ ಪೌಂಡೇಶನ್ ಜಿಲ್ಲೆಯಲ್ಲಿ ದಿಪಾವಳಿ ಮತ್ತು ಈದ್ ಮಿಲಾದ್ ಪ್ರಯುಕ್ತ ವಿಶಿಷ್ಟ ಮಾನವ ಸೇವೆಯನ್ನು ಮಾಡಿ ಹಲವು ಸಂಸಾರಗಳ ಕಣ್ಣೀರು ಒರೆಸಿತು.

ಉಳ್ಳಾಲದಲ್ಲಿ ನಾರಾಯಣ ಎಂಬವರು ಕಳೆದ ಒಂದು ವರ್ಷದ ಹಿಂದೆ ಪೈಂಟರ್ ಕೆಲಸ ಮಾಡುತ್ತಿದ್ದಾಗ ಕಟ್ಟಡದಿಂದು ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು. ಅವರ ಸಂಸಾರದಲ್ಲಿ ಎಲ್ಲರೂ ನಾರಾಯಣ್ ರವರ ದುಡಿಮೆಯನ್ನು ಆಶ್ರಯಿಸಿತ್ತು. ಅವರಿಗೆ ಯಾವುದೇ ಸಂಪಾದನೆಯ ದಾರಿ ಇರಲಿಲ್ಲ. ಇದನ್ನು ತಿಳಿದ ಬಿ- ಹ್ಯೂಮನ್ ನ ಆಶಿಫ್ ಡೀಲ್ಸ್ ರವರ ನೇತೃತ್ವದಲ್ಲಿ ಈ ಮನೆಗೆ ಬೇಟಿ ನೀಡಿ ಅವರ 87 ಸಾವಿರ ರುಪಾಯಿ ಪೈನಾಂನ್ಸ್ ಸಾಲವನ್ನು ತಕ್ಷಣ ತೀರಿಸಿತು. ಹಿದಾಯ ಪೌಂಡೇಶನ್ ಈ ಸಂಸಾರಕ್ಕೆ ಒಂದು ವರ್ಷದ ರೇಶನ್ ನೀಡಿತು. ಚಿಕಿತ್ಸೆಗೆ ಬೇಕಾದ ನೆರವು ನೀಡುವ ಸಾಂತ್ವನ ಹೇಳಿತು.

ಈ ಸಂದರ್ಭದಲ್ಲಿ ಹೈಕೋರ್ಟ್ ವಕೀಲರಾದ ಮುಝಪ್ಪರ್ ಅಹ್ಮದ್ ರವರು ” ಮನುಷ್ಯ ಸೇವೆಯಲ್ಲಿ ಮಾನವನ ಕಷ್ಟವನ್ನು ನೋಡಬೇಕೇ ಹೊರತು ಧರ್ಮವನ್ನಲ್ಲ, ಬಿ-ಹ್ಯೂಮನ್ ಮಂಗಳೂರಿನ ಸೌಹಾರ್ಧತೆಯನ್ನು ಜೀವಂತ ಇರಿಸುವ ಪ್ರಯತ್ನ ಮಾಡಿದೆ. ಪ್ರವಾದಿ ಮುಹಮ್ಮದ್ (ಸ)ರ ಜನ್ಮ ದಿನದ ಈ ತಿಂಗಳು ಅವರ ಸಂದೇಶವನ್ನು ಪ್ರಾಯೋಗಿಕ ಗೊಳಿಸಿ ನೆರೆಕರೆಯ ಸಹೋದರನ ಸಂಸಾರದ ಕಣ್ಣೀರು ಒರೆಸಿದೆ” ಎಂದರು.

ಮಾನಸಿಕ ಅಸ್ವಸ್ಥರು ಮನುಷ್ಯರಲ್ಲವೇ ? ಅವರಿಗೂ ಹಸಿವು ಇದೆ, ಚಳಿ-ಬಿಸಿಲಿನ ಅನುಭವ ಇದೆ, ನೋವು ಇದೆ. ಬುದ್ದಿ ಸಮತೋಲನ ತಪ್ಪಿದ ಕಾರಣದಿಂದ ಅವರು ಬೀದಿಯಲ್ಲಿ ಅಲೆದಾಡುತ್ತಾರೆ. ಅವರು ಅತ್ಯಂತ ನತದೃಷ್ಟ ಮನುಷ್ಯರಾಗಿ ಬದುಕುತ್ತಾರೆ. ಇಂತಹ ಮನುಷ್ಯರ ಸೇವೆ ಮಾಡುವ ಸ್ನೇಹಾಲಯದ ಸೇವೆ ಅನನ್ಯ. ಕಳೆದ ಎರಡು ದಿನ ಸ್ನೇಹಾಲಯದ ಜೋಸೆಫ್ ಕ್ರಾಸ್ತಾರ ಜೊತೆ ನಗರದ ಬೀದಿಯಲ್ಲಿರುವ ಮಾನಸಿಕ ಅಸ್ವಸ್ಥರನ್ನು ಸಂರಕ್ಷಿಸುವ ಕಾರ್ಯ ಬಿ-ಹ್ಯೂಮನ್ ತಂಡವು ಮಾಡಿತು. ಸ್ನೇಹಲಾಯಕ್ಕೂ ಬೇಟಿಕೊಟ್ಟು ಅವರಿಗೆ ದೀಪಾವಳಿ ಹಬ್ಬದ ಶುಭ ಕೋರಿದರು.

ನೂರಕ್ಕಿಂತ ಹೆಚ್ಚು ಮಾನಸಿಕರನ್ನು ಸಂರಕ್ಷಿಸುತ್ತಿರುವ ಹಾಗೇ ಮೂನ್ನೂರು ರೋಗಿಗಳನ್ನು ಸಂಪೂರ್ಣ ಗುಣಪಡಿಸಿ ಅವರನ್ನು ಸಾಮಾನ್ಯ ಮನುಷ್ಯರಂತೆ ಬದುಕಲು ಅವಕಾಶ ಮಾಡಿ ಕೊಟ್ಟ ಸ್ನೇಹಾಲಯಕ್ಕೆ ಬಿ-ಹ್ಯೂಮನ್ ವತಿಯಿಂದ ಆರ್ಥಿಕ ಸಹಾಯ ನೀಡಲಾಯಿತು. ಜೋಸೆಫ್ ಕ್ರಾಸ್ತಾರ ಅನನ್ಯ ಸೇವೆಯನ್ನು ಪ್ರಶಂಸಿಸಿದ ಬಿ- ಹ್ಯೂಮನ್ ಸಂಸ್ಥೆಯ ಸ್ಥಾಪಕರಾದ ಆಶಿಫ್ ಡೀಲ್ಸ್ ” ಜೋಸೆಫರು ದೇವರ ಸೇವೆಯನ್ನು ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡಲು ಸಾವಿರ ಪುಣ್ಯಾತ್ಮರ ಹೃದಯ ಬೇಕು. ಇದು ನಮ್ಮಂತಹ ಒಂದು ಹೃದಯದಿಂದ ಆಗುವಂತದ್ದಲ್ಲ ಎಂದರು”.

ಪುತ್ತೂರು ತಾಲೂಕಿನಲ್ಲಿ ಎರಡು ಸಂಸಾರಕ್ಕೆ ನೆರಾವಾದ ಬಿ-ಹ್ಯೂಮನ್ ಮತ್ತು ಹಿದಾಯ ಪೌಂಡೇಶನ್ ಇಬ್ಬರು ಯುವತಿಯರ ಮದುವೆಗೆ ನೆರವು ನೀಡಿತು. ರೇಶನ್ ಮತ್ತು ಶಿಕ್ಷಣ ಸೌಲಭ್ಯಕ್ಕೆ ಸಂಸಾರವನ್ನು ಗುರುತಿಸಿತು. ಮೂವತ್ತು ವರ್ಷ ದಾಟಿಯೂ ಮದುವೆಯಾವದೆ ಉಳಿದಿರುವ ಸಂಸಾರದ ಹೆಣ್ಣುಮಗಳಿಗೆ ಟಾಲೆಂಟ್ ರಿಸರ್ಚ್ ಪೌಂಡೇಶನ್ ಐದು ಪವನ್ ಚಿನ್ನ ಮತ್ತು ವಾಚ್ ನೀಡಿದರೆ, ಬಿ- ಹ್ಯೂಮನ್ ಸದಸ್ಯರು ಮದುವೆ ವಸ್ತ್ರ ನೀಡಿತು.

ಪ್ರಸಿದ್ದ ಬರಹಗಾರ ಹಾರಿಸ್ ಸ್ನೇಹಜೀವಿಯವರ ಕೋರಿಕೆಯ ಮೇರೆಗೆ ಇನ್ನೊಂದು ಬಡ ಸಂಸಾರದ ಹೆಣ್ಣುಮಗಳ ಮದುವೆಗೆ ನೆರವು ನೀಡಲಾಯಿತು. ಆ ಮನೆಯಲ್ಲಿ ತಾಯಿಯ ಜೊತೆ ವಾಸಿಸುವ ನಾಲ್ಕು ಯುವತಿಯರಲ್ಲಿ ಇಬ್ಬರಿಗೆ ಶಿಕ್ಷಣ ನೆರವು ನೀಡುವ ಭರವಸೆಯನ್ನು ಹಿದಾಯ ಪೌಂಡೇಶನ್ ಮಾಡಿತು. ನೆರವನ್ನು ಸ್ವೀಕರಿಸಿ ಸಂಸಾರಕ್ಕೆ ಒದಗಿಸಿ ಮಾತನಾಡಿದ ಹಾರಿಸ್ ಸ್ನೇಹಜೀವಿ ” ಪ್ರವಾದಿ ಮುಹಮ್ಮದ್ (ಸ)ರು ಜನಿಸಿದ ತಿಂಗಳನ್ನು ಅರ್ಥಪೂರ್ಣ ಮಾಡಿದ, ಸಂದೇಶವನ್ನು ಪ್ರಾಯೋಗಿಕ ಮಾಡಿದ ಬಿ-ಹ್ಯೂಮನ್ ಸದಸ್ಯರ ಸೇವೆ ಎಲ್ಲರಿಗೂ ಮಾದರಿ, ನಾವು ಶುಭ ದಿನಗಳನ್ನು ಸಂಭ್ರಮಿಸುವ ಜೊತೆಗೆ ಆ ದಿನದ ಮಹತ್ವವನ್ನು ಮಾನವರಿಗೆ ಈ ರೀತಿಯಲ್ಲೂ ತಲುಪಿಸಬಹುದು ಎಂಬುವುದನ್ನು ಇವರು ನಮಗೆ ವಿವರಿಸಿದ್ದಾರೆ”.

ಎಲ್ಲಾ ಧರ್ಮೀಯ ಮನುಷ್ಯರಿಗೆ ನೆರವು ನೀಡುವ ಮೂಲಕ ಬಿ-ಹ್ಯೂಮನ್ ಮತ್ತು ಹಿದಾಯ ಪೌಂಡೇಶನ್ ಶುಭ ದಿನವನ್ನು ಪುಣ್ಯ ಸಿಗುವ ಸತ್ಕರ್ಮವಾಗಿಸಿದೆ. ಈ ರೀತಿಯಲ್ಲಿ ಎಲ್ಲರೂ ಶ್ರಮಿಸಿ ಮಾನವ ಕುಲದ ಉನ್ನತಿಗೆ ದುಡಿದರೆ ಸುಂದರ ಸಮಾಜ ನಿರ್ಮಾಣ ಆಗಬಹುದು. ಮೂರು ದಿನದ ಈ ಪ್ರಯಾಣದಲ್ಲಿ ಹಿದಾಯ ಪೌಂಡೇಶನ್ ನ ಸಾದಿಕ್ ಹಸನ್ ಮತ್ತು ಸಿದ್ದೀಕ್ , ಬಿ- ಹ್ಯೂಮನ್ ನ ಪ್ರದೀಪ್ ಕೊಟ್ಟಾರಿ, ವಿಂನ್ಸಿ ಡಿಸೋಜ, ಸಲೀಂ, ಅಹ್ನಾಫ್ ಡೀಲ್ಸ್, ಕರೀಮ್, ರಹ್ಮಾನ್, ಉಳ್ಳಾಲ ಮುಕ್ಕಚ್ಚೇರಿ ಪ್ರೆಂಡ್ಸ್ ಇದರ ಅಜೀಝ್, ಕರೀಮ್ ಸದಸ್ಯರು ಭಾಗವಹಿಸಿದ್ದರು.

ಮಾನನವ ಕಲ್ಯಾಣ ಕಾರ್ಯಕ್ಕೆ ನೆರವು ನೀಡುವವರು ಈ ಸಂಸ್ಥೆಯೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಬಹುದು.

Leave a Reply

Your email address will not be published. Required fields are marked *