ಛತ್ತೀಸ್’ಘಡ: ಆರಂಭವಾದ ಮೊದಲ ಹಂತದ ವಿಧಾನಸಭಾ ಚುನಾವಣೆ!
ರಾಯಪುರ: ಛತ್ತೀಸ್’ಘಢ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ಸೋಮವಾರ ನಕ್ಸಲ್ ಪೀಡಿತ 8 ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭಗೊಂಡಿದೆ. ಚುನಾವಣೆ ಬಹಿಷ್ಕರಿಸುವಂತೆ ಈಗಾಗಲೇ ಕರೆ ನೀಡಿರುವ ನಕ್ಸಲರು, ವಿಧ್ವಂಸಕ ಕೃತ್ಯಗಳನ್ನು ಆರಂಭಿಸಿದ್ದು, ಈ ಹಿನ್ನಲೆಯಲ್ಲಿ ಛತ್ತೀಸ್ಗಢದಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಪೊಲೀಸರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಛತ್ತೀಸ್ಗಢ ರಾಜ್ಯದಲ್ಲಿ ಒಟ್ಟು 90 ಕ್ಷೇತ್ರಗಳಿವೆ. ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ, ಸತತ 4ನೇ ಬಾರಿಗೆ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದೆ. ಬಿಜೆಪಿಯನ್ನು ಸೋಲಿಸಿ ಗದ್ದುಗೆ ಏರಲು ಕಾಂಗ್ರೆಸ್ ಶತಪ್ರಯತ್ನ ನಡೆಸುತ್ತಿದೆ. ಮೊದಲ ಹಂತದಲ್ಲಿ 31.79 ಲಕ್ಷ ಮತದಾರರು ಇದ್ದು, 4336 ಮತಗಟ್ಟೆಗಳಿವೆ. ನಕ್ಸಲ್ ದಾಳಿ ಭೀತಿ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್’ಗಳ ಮೂಲಕ ರವಾನೆ ಮಾಡಲಾಗಿದೆ. ಡ್ರೋನ್ ಕ್ಯಾಮೆರಾ ನಿಯೋಜಿಸಿ, ನಕ್ಸಲರ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.