ಸಿಬಿಐ ನಿರ್ದೇಶಕರ ನೇಮಕ; ಆಕ್ಷೇಪದ ಕುರಿತು ಸ್ಪಷ್ಟನೆ ನೀಡಿದ ಮಲ್ಲಿಕಾರ್ಜುನ ಖರ್ಗೆ!

ನ್ಯೂಸ್ ಕನ್ನಡ ವರದಿ (5-2-2019): ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ಆಕ್ಷೇಪವಿದೆ, ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ ಇತ್ತೀಚಿಗೆ ಮಧ್ಯ ಪ್ರದೇಶದ ಮಾಜಿ ಪೊಲೀಸ್ ಡಿಜಿಪಿ ರಿಷಿ ಕುಮಾರ್ ಶುಕ್ಲಾ ಅವರನ್ನು ಸಿಬಿಐನ ನೂತನ ನಿರ್ದೆಶಕರನ್ನಾಗಿ ನೇಮಿಸಿದ್ದಕ್ಕೆ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಜೇಟ್ಲಿ, ವಿರೋಧ ವ್ಯಕ್ತಪಡಿಸುವುದೇ ರಾಜಕೀಯ ಅಸ್ತ್ರವಾಗಬಾರದು. ಅದು ಖರ್ಗೆ ಅವರ ರೀತಿಯ ವಿರೋಧವೂ ಆಗಬಾರದು, ಮುಕ್ತ ಮನಸ್ಸಿನ ವಿರೋಧವಾಗಿರಬೇಕು. ಆದರೆ ಖರ್ಗೆ ಅವರು ವರ್ಗಾವಣೆ ನೇಮಕಾತಿ ವಜಾ, ಎಲ್ಲದಕ್ಕೂ ರಾಜಕೀಯ ಬಣ್ಣ ಹಚ್ಚುತ್ತಿದ್ದಾರೆ ಎಂದು ಟೀಕಿಸಿದ್ದರು.

ಈ ಸಂಬಂಧ ಇಂದು ಜೇಟ್ಲಿಗೆ ಪತ್ರ ಬರೆದಿರುವ ಖರ್ಗೆ ಅವರು, ಸಿಬಿಐ ನಿರ್ದೇಶಕರ ನೇಮಕ ವಿಧಾನಕ್ಕೆ ನಮ್ಮ ವಿರೋಧವಿದೆ. ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಅಲ್ಲ. ಸಿಬಿಐ ನಿರ್ದೇಶಕರ ಆಯ್ಕೆ ವಿಧಾನದಿಂದ ಪ್ರಧಾನಿ ಕಚೇರಿ ಮೌಲ್ಯ ಹಾಳಾಗಿದೆ ಎಂದು ದೂರಿದ್ದಾರೆ.ನೂತನ ಸಿಬಿಐ ನಿರ್ದೇಶಕರಿಗೆ ಸಾಕಷ್ಟು ಅನುಭವ ಇದೆ. ಆ ಅನುಭವದ ಮೂಲಕ ಹಾಳಾಗಿರುವ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯನ್ನು ಮರು ನಿರ್ಮಿಸುವ ವಿಶ್ವಾಸವಿದೆ ಎಂದು ಖರ್ಗೆ ಹೇಳಿದ್ದಾರೆ.

ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದ ನಂತರ ಸರ್ಕಾರ ಕಳೆದ ಶನಿವಾರ ರಿಷಿ ಕುಮಾರ್ ಶುಕ್ಲಾ ಅವರನ್ನು ಸಿಬಿಐನ ಹೊಸ ನಿರ್ದೆಶಕರನ್ನಾಗಿ ನೇಮಿಸಿದೆ. ಕೂಡಲೇ ಖರ್ಗೆ ಅವರು ಶುಕ್ಲಾ ಅವರ ನೇಮಕವನ್ನು ವಿರೋಧಿಸಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಇವರ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *