ನನ್ನ ಪತಿ ಅರ್ಧಕ್ಕೆ ಬಿಟ್ಟ ಕೆಲಸ ಪೂರೈಸುವೆ, ಉಗ್ರರ ಚೆಂಡಾಡುತ್ತೇನೆ, ನನ್ನನ್ನೂ ಸೇನೆಗೆ ಸೇರಿಸಿ!: ಹುತಾತ್ಮನ ಪತ್ನಿ
ನ್ಯೂಸ್ ಕನ್ನಡ ವರದಿ: ಮನುಷ್ಯ ವಿರೋಧಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧ ಗುರು ಅವರ ಅಂತಿಮ ಸಂಸ್ಕಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಧನ ಪತ್ನಿ ಕಲಾವತಿ, ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ. ಉಗ್ರರ ಚೆಂಡಾಡುತ್ತೇನೆ. ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸವನ್ನು ಪೂರೈಸುತ್ತೇನೆ. ನನ್ನ ಪತಿಯ ಆಸೆಗಳನ್ನು ಈಡೇರಿಸುತ್ತೇನೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.ನಾನು ಅವರ ಪತ್ನಿ ಅನ್ನೋದಕ್ಕೆ ನಿಜಕ್ಕೂ ಹೆಮ್ಮೆ ಎನಿಸಿದೆ. ದೇಶದ ಸೇವೆ ಮಾಡುವಾಗ ತನ್ನ ಪತಿಯನ್ನು ಆ ದೇವರು ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಅವರು ಅರ್ಧ ಕೆಲಸ ಮಾಡಿ ಹೋಗಿದ್ದಾರೆ. ನಾನು ಉಳಿದ ಕೆಲಸವನ್ನು ಮಾಡಲು ಸಜ್ಜಾಗಿದ್ದೇನೆ. ಸೇನೆಗೆ ನಾನೂ ಸೇರಬೇಕು ಎನಿಸಿದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ದಾಳಿ ನಡೆದ ದಿನದ ಬಗ್ಗೆ ನೆನಪಿಸಿಕೊಂಡ ಅವರು, ದಿನಾಲೂ ನನ್ನ ಪತಿ ಕರೆ ಮಾಡುತ್ತಿದ್ದರು. ಆದರೆ ದಾಳಿ ನಡೆದ ದಿನ ಸ್ವಲ್ಪ ಬ್ಯುಸಿಯಾಗಿದ್ದರು. ಹಾಗಾಗಿ ನಂತರ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಈ ಕರೆ ಬರಲೇ ಇಲ್ಲ. ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ, ಇನ್ನೂ 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಗುರು ಸದಾ ನನ್ನೊಂದಿಗೆ ಹೇಳುತ್ತಿದ್ದರು. ಆದರೆ ಅದಕ್ಕೂ ಮೊದಲೇ ದೇಶಸೇವೆ ನಡೆಸುತ್ತಲೇ ಹುತಾತ್ಮರಾದರು ಎಂದು ಭಾವುಕರಾದರು.