ಪಾಕಿಸ್ತಾನದ ಭಯೋತ್ಪಾದಕರ ಅಡಗುದಾಣದ ಮೇಲೆ ವಾಯುದಾಳಿ ನಡೆದಿದ್ದು ಹೇಗೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ಭಾರತದ ಮೇಲೆ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಆತ್ಮಾಹುತಿ ದಳದ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದರ ಹಿನ್ನೆಲೆಯಲ್ಲಿ ವಾಯುದಾಳಿ ನಡೆಸಲಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮುಜಾಫರ್‍ಬಾದ್, ಬಾಲ್‍ಕೋಟ್, ಮತ್ತು ಚಕೋತಿಯ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಘಟನೆಯಲ್ಲಿ 200 ರಿಂದ 300 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದ್ದು, ನಿರ್ದಿಷ್ಟ ಸಂಖ್ಯೆ ನಂತರ ತಿಳಿಯಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಜಯ್‍ಗೋಖಲೆ ತಿಳಿಸಿದ್ದಾರೆ.

ಘಟನೆ ನಂತರ ಪತ್ರಿಕಾಗೋಷ್ಠಿ ನಡೆಸಿದ ಅವರು, ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನದ ಉಗ್ರ ಮೌಲಾನಾ ಮಸೂದ್ ಅಜರ್‍ನ ಭಾವಮೈದಾ ಹಾಗೂ ಜೈಷ್-ಎ- ಮೊಹಮ್ಮದ್ ಸಂಘಟನೆಯ ಪ್ರಮುಖ ಉಗ್ರ ಮೌಲಾನ ಯೂಸಫ್ ಅಜರ್ ಸೇರಿದಂತೆ ಕಮಾಂಡರ್‍ಗಳು, ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಮುಂಜಾನೆ 3.30ಕ್ಕೆ ಉಗ್ರರ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಮೀರಾಜ್ 2000 ಯುದ್ಧವಿಮಾನ ಹಾಗೂ ಡ್ರೋಣ್ ದಾಳಿ ನಡೆಸಿದೆ. 20 ರಿಂದ 22 ನಿಮಿಷಗಳವರೆಗೆ ಸೀಮಿತ ಅವಧಿಯಲ್ಲಿ ದಾಳಿ ಮಾಡಲಾಗಿದೆ. ದಾಳಿಯಿಂದ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ಖಚಿತವಾಗಿಲ್ಲ. ಆದರೆ ನಮ್ಮ ಸೇನೆ ಭಾರೀ ಪ್ರಮಾಣದಲ್ಲಿ ಹಾನಿ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಕಳೆದ 14 ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನದ ಜೈಷ್-ಇ-ಮೊಹಮ್ಮದ್ ಆತ್ಮಾಹುತಿ ದಳದ ಉಗ್ರರು ಸಿಆರ್‍ಪಿಎಫ್ ಯೋಧರ ವಾಹನದ ಮೇಲೆ ಬಾಂಬ್ ಸ್ಫೋಟಿಸಿ 44 ಯೋಧರನ್ನು ಹತ್ಯೆ ಮಾಡಿದ್ದರು. ಈ ಘಟನೆ ನಂತರ ನಾವು ಉಗ್ರ ಸಂಘಟನೆಗಳು ಮತ್ತು ಉಗ್ರರ ಮೇಲೆ ಕ್ರಮಕೈಗೊಳ್ಳುವಂತೆ ನೆರೆ ರಾಷ್ಟ್ರದ ಮೇಲೆ ಒತ್ತಡ ಹಾಕಿದ್ದೆವು. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಸಾಕ್ಷ್ಯಗಳನ್ನು ನೀಡಿದರೆ ಕ್ರಮಕೈಗೊಳ್ಳುವ ಹುಸಿ ಭರವಸೆ ನೀಡಿದರು. ಹೀಗಾಗಿ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸುವುದು ಅನಿವಾರ್ಯವಾಯಿತು ಎಂದು ಸಮರ್ಥಿಸಿಕೊಂಡರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಾಕ್ ಉಗ್ರರು ಭಾರತದಲ್ಲಿ ದಾಳಿ ನಡೆಸಲು ಎಲ್‍ಒಸಿ ಬಳಿ ಹೊಂಚು ಹಾಕಿದ್ದರು. ಜೈಷ್-ಇ-ಮೊಹಮ್ಮದ್ ಸಂಘಟನೆ ಮೇಲೆ ಪಾಕ್ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಬದಲಿಗೆ ಈ ಸಂಘಟನೆಗೆ ಇನ್ನಷ್ಟು ಕುಮ್ಮಕ್ಕು ನೀಡಲು ಮುಂದಾಯಿತು. ಇದರಿಂದ ದಾಳಿ ನಡೆಸುವುದು ಅನಿವಾರ್ಯವಾಯಿತು ಎಂದು ಗೋಖಲೆ ತಿಳಿಸಿದರು. ಪಾಕ್ ಸರ್ಕಾರ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ ಎಂದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಮೀರಾಜ್ ಯುದ್ಧ ವಿಮಾನ 6 ರಿಂದ 10 ಎಕರೆ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು ಮೂರು ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದೆ. ಇಷ್ಟಾದರೂ ನೆರೆ ರಾಷ್ಟ್ರ ಏನೂ ಆಗಿಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

ಎಲ್‍ಒಸಿ ಬಳಿ ಮತ್ತೆ ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದರು. ಜೈಷ್-ಇ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಳದ ಉಗ್ರರು ಭಾರತದೊಳಗೆ ನುಸುಳಲು ಸಂಚು ರೂಪಿಸಿರುವುದನ್ನು ಗುಪ್ತಚರ ವಿಭಾಗ ಪತ್ತೆ ಮಾಡಿತ್ತು. ಉಗ್ರ ಸಂಘಟನೆಗಳ ಮೇಲೆ ಪಾಕ್ ಸರ್ಕಾರಕ್ಕೆ ಹಿಡಿತವಿಲ್ಲದ ಕಾರಣ ದಾಳಿ ನಡೆಸಲಾಗಿದೆ. ಪುಲ್ವಾಮಾ ಘಟನೆ ನಂತರವೂ ಅಲ್ಲಿನ ಸರ್ಕಾರ ಎಚ್ಚೆತ್ತುಕೊಳ್ಳದ ಕಾರಣ ನಮ್ಮ ಸೇನೆ ಪ್ರತ್ಯುತ್ತರ ನೀಡಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *