ಸ್ವಂತ ಪಕ್ಷ ಬಿಜೆಪಿಗೇ ದೊಡ್ಡ ತಲೆನೋವಾಗಿದ್ದಾರೆ ಆರ್. ಅಶೋಕ್! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ : ಕೇಂದ್ರದ ಮಾಜಿ ಸಚಿವ ಅನಂತಕುಮಾರ್‌ ನಿಧನದ ಬಳಿಕ ಬೆಂಗಳೂರಿನಲ್ಲಿ ತಮ್ಮದೇ ‘ಚಕ್ರಾಧಿಪತ್ಯ’ ಸ್ಥಾಪನೆಗೆ ಮುಂದಾಗಿರುವ ಮಾಜಿ ಡಿಸಿಎಂ ಆರ್‌.ಅಶೋಕ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ತಮ್ಮ ಮಾತೇ ಅಂತಿಮ ಎಂದು ಪಟ್ಟು ಹಿಡಿದಿರುವುದು ಬಿಜೆಪಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೆಟ್‌ ನೀಡುವುದು ಬೇಡ ಎಂದು ಅಶೋಕ ಪಟ್ಟು ಹಿಡಿದಿದ್ದಾರೆ. ಈ ಮೂಲಕ ಬೆಂಗಳೂರು ನಗರದಲ್ಲಿ ತಮ್ಮ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಅಶೋಕ ತಂತ್ರ ಹೆಣೆದಿದ್ದಾರೆ. ಕುತೂಹಲಕಾರಿ ಸಂಗತಿ ಎಂದರೆ ಈ ಹಿಂದೆ ಅನಂತಕುಮಾರ್‌ ಬೆಂಬಲದಿಂದಲೇ ರಾಜಕೀಯವಾಗಿ ಬೆಳೆದ ಮುಖಂಡರು ತೇಜಸ್ವಿನಿ ವಿರುದ್ಧವಾಗಿ ಅಶೋಕ್‌ ಜತೆ ಕೈ ಜೋಡಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿಯೇ ಬಿಜೆಪಿ ಅಸಮಾಧಾನದ ಕೆಂಡವನ್ನು ಸೆರಗಿನಲ್ಲಿ ಕಟ್ಟಿಕೊಂಡು ಓಡಾಡುವಂತಾಗಿದೆ. ಇನ್ನು ಇದೆಲ್ಲದರ ಮಧ್ಯೆ ಶಿಕ್ಷಣ ತಜ್ಞ ಡಾ.ಚಂದ್ರಶೇಖರ್‌ ಎಂಬುವರು ಸದಾನಂದ ಗೌಡರ ಬದಲು ತಮಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನೀಡುವಂತೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಸದಾನಂದ ಗೌಡರು ಸ್ಥಳೀಯರಲ್ಲ ಎಂಬ ವಾದವನ್ನು ಈಗ ಹರಿಬಿಡಲಾಗುತ್ತಿದ್ದು, ಇದರ ಲಾಭ ಪಡೆಯಲು ಚಂದ್ರಶೇಖರ್‌ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *