ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಟಿಕೆಟ್: ಡಾ.ಆರತಿ ಕೃಷ್ಣ ಹೆಸರು ಮುಂಚೂಣಿಯಲ್ಲಿರಲು ಕಾರಣವೇನು?

ನ್ಯೂಸ್ ಕನ್ನಡ ವರದಿ: ಲೋಕಸಭಾ ಚುನಾವಣೆ ಹತ್ತಿರ ಬಂದಂತೆ ರಾಜ್ಯದಲ್ಲಿ ತೀವ್ರ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೇಟಿಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

ರಾಜ್ಯದ ಕರಾವಳಿ ಭಾಗಕ್ಕೆ ಬಂದರೆ, ಉಡುಪಿ ಚಿಕ್ಕಮಗಳೂರು ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಜಯಗಳಿಸಿದ್ದ ಬಿಜೆಪಿಗೆ ಈ ಬಾರಿ ಗೆದ್ದ ಸಂಸದರ ವಿರುದ್ಧ ಧ್ವನಿಎತ್ತುವ ಮೂಲಕ ಹಲವಾರು ನಾಯಕರೇ ತಲೆನೋವಾಗಿದ್ದಾರೆ. ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಹಿಂದೂ ಸಂಘಟನೆಯ ಮುಖಂಡ, ಬಿಜೆಪಿ ಟಿಕೆಟ್ ಆಕಾಂಕ್ಷಿ ಸತ್ಯಜಿತ್ ಸುರತ್ಕಲ್ ಪರ ಬ್ಯಾನರ್ ಅಭಿಯಾನ ನಡೆದಿತ್ತು, ನಳಿನ್ ಕುಮಾರ್ ಕಟೀಲ್ ಬದಲಿಸಿ ಬಿಜೆಪಿ ಉಳಿಸಿ ಎಂದು ಬಿಜೆಪಿ ಕಾರ್ಯಕರ್ತರೇ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಅಭಿಯಾನ ಮಾಡುತ್ತಿದ್ದಾರೆ. ‘ಪಂಪ್’ವೆಲ್ ಬ್ರಿಡ್ಜ್’ ಕಾಮಗಾರಿಯ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ನಿರಂತರವಾಗಿ ಹೊಸ ಹೊಸ ಗಡುವು ನೀಡಿ ಜನರಿಗೆ ನೀಡುತ್ತಾ ಬಂದಿರುವ ಆಶ್ವಾಸನೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದ ಪಕ್ಷಭೇಧವಿಲ್ಲದೇ ಯುವ ಸಮುದಾಯ ಟ್ರೋಲ್ ಮಾಡಲು ಉಪಯೋಗಿಸುತ್ತಿದೆ.

ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದಾಜ್ಲೆಯವರಿಗೂ ಪರಿಸ್ಥಿತಿ ಭಿನ್ನವಿಲ್ಲ. ‘ಶೋಭಾ ಗೋ ಬ್ಯಾಕ್’ ಎಂದು ಬಿಜೆಪಿಯ ಕಾರ್ಯಕರ್ತರೇ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಅಭಿಯಾನ ಬಿಜೆಪಿಗರೇ ಬಿಜೆಪಿಗರ ಮೇಲೆ ಕೇಸು ದಾಖಲಿಸುವ ಮಟ್ಟಕ್ಕೆ ಬೆಳೆದಿತ್ತು. ಉಡುಪಿ ಚಿಕ್ಕಮಗಳೂರಿನ ಮತದಾರರ ದೃಷ್ಟಿಯಿಂದ ಗಮನಿಸಿದರೂ ಸಂಸದೆ ಶೋಭಾ ಕುರಿತು ಅಸಮಾಧಾನ ಇದ್ದೇ ಇದೆ. ತಮ್ಮ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದಿದ್ದೇ ಕಮ್ಮಿ, ಕೇವಲ ಸುದ್ದಿಗೋಷ್ಠಿ ನಡೆಸಲು ಹಾಗೂ ಸಾವಿನ ಮನೆಯಲ್ಲಿ ರಾಜಕಾರಣ ನಡೆಸಲು ಹಾಜರಿರುತ್ತಾರೆ ಎಂದು ಕಾಂಗ್ರೆಸ್ ನೇರವಾಗಿ ಆರೋಪಿಸಿದರೆ, ಹಲವಾರು ಬಿಜೆಪಿ ನಾಯಕರು ಹೊತ್ತು ತಂದ ಅವಹಾಲುಗಳನ್ನೂ ಇತ್ಯರ್ಥ ಗೊಳಿಸಲು ಸಮಯವಿಲ್ಲ ಅವರಿಗೆ ಎಂದು ಬಿಜೆಪಿಗರೇ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಅಲ್ಲದೇ ಉಡುಪಿ ಟಿಕೇಟಿಗಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮೊಗವೀರ ಮುಂದಾಳು ಯಶ್ಪಾಲ್ ಸುವರ್ಣ ಹಾಗೂ ಉದ್ಯಮಿ, ಯುವ ನಾಯಕ ವಿಲಾಸ್ ನಾಯಕ್ ತೀವ್ರ ಪೈಪೋಟಿ ನಡೆಸುತ್ತಿದ್ದರೂ ಸಂಸದೆ ಶೋಭಾರವರು ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಟಿಕೆಟ್ ಅವರಿಗೇ ಬಹುತೇಕ ಖಚಿತ ಎನ್ನಲಾಗಿದೆ.

ಆದರೆ ಇದಕ್ಕಿಂತಲೂ ಹೆಚ್ಚು ಸುದ್ದಿಯಾಗುತ್ತಿರುವುದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿರುವ ಡಾ.ಆರತಿ ಕೃಷ್ಣ. ಕಾಂಗ್ರೆಸ್ ಪಕ್ಷದ ಅನಿವಾಸಿ ಭಾರತೀಯರ ಜಾಗತಿಕ ನಾಯಕರ ಸಾಲಿನಲ್ಲಿ ಗುರುತಿಸಿಕೊಂಡಿರುವ, ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಹಲವಾರು ವಿದೇಶಿ ಪ್ರವಾಸ ಹಾಗೂ ಅನಿವಾಸಿ ಕಾರ್ಯಕ್ರಮಗಳ ಯಶಸ್ವಿಯ ಹಿಂದಿರುವ ಶಕ್ತಿಯಾಗಿ ಗುರುತಿಸಿಕೊಂಡು ಇತ್ತೀಚೆಗೆ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ರಾಹುಲ್ ಗಾಂಧಿಯವರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದ ಪ್ರಮುಖ ಆಯೋಜಕರಾಗಿ ಗುರುತಿಸಲ್ಪಟ್ಟಿರುವ ಡಾ. ಆರತಿ ಕೃಷ್ಣ ಹೆಸರು ಈ ಬಾರಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಡಾ. ಆರತಿ ಕೃಷ್ಣ ಧಿಡೀರನೇ ರಾಜಕೀಯಕ್ಕೆ ಧುಮುಕಿ ಆಕಾಂಕ್ಷಿಯಾಗಿ ಪ್ರತ್ಯಕ್ಷರಾದವರೇನಲ್ಲ, ಆರ್‌.ಗುಂಡೂರಾವ್‌ ಅವರ ಸಂಪುಟದಲ್ಲಿ ಸಚಿವರಾಗಿದ್ದ, ಕುಡಿಯುವ ನೀರಿಗಾಗಿ ರಾಜ್ಯದಲ್ಲಿ ಬೋರ್‌ವೆಲ್‌ ಮೂಲಕ ನೀರು ನೀಡಿದ ‘ಭಗೀರಥ’ ಎಂದೇ ಹೆಸರಾದ ಬೇಗಾನೆ ರಾಮಯ್ಯನವರ ಮಗಳಾದ ಆರತಿ ರಾಷ್ಟ ಮಟ್ಟದ ರಾಜಕಾರಣವನ್ನು ಸಣ್ಣ ಪ್ರಾಯದಲ್ಲೇ ಕಣ್ಣೆದುರು ಕಂಡು ಬೆಳೆದವರು. ನಿಮಗೆಲ್ಲಾ ತಿಳಿದಂತೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವೇ ಚಿಕ್ಕಮಗಳೂರು. ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿ ಚುನಾವಣೆಗೆ ನಿಂತಾಗ, ಮೈಕ್ ಹಿಡಿದು ಅವರ ಭಾಷಣವನ್ನು ಕನ್ನಡಕ್ಕೆ ಸುಲಲಿತವಾಗಿ ಭಾಷಾಂತರಿಸಿದವರು ಇದೇ ಬೇಗಾನೆ ರಾಮಯ್ಯ. ಚುನಾವಣೆ ಸಂದರ್ಭದಲ್ಲಿ ಮತ್ತು ಚುನಾವಣೆ ಗೆದ್ದನಂತರವೂ ರಾಮಯ್ಯ ಕುಟುಂಬದ ಜೊತೆ ನಿಕಟ ಬಾಂಧವ್ಯ ಹೊಂದಿದ್ದರು ಇಂದಿರಾ ಗಾಂಧಿ ಹಾಗೂ ಆ ಸಂದರ್ಭದಲ್ಲಿ ಆರತಿಯವರನ್ನು ‘ನೀನು ರೂಪವತಿ ಹಾಗೂ ಬುದ್ಧಿವಂತೆಯಾಗಿ ಬೆಳೆಯುವೆ’ ಎಂದು ಹಾರೈಸಿದ್ದರು.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ, ಎಂ.ಎ ಪದವೀಧರೆ ಡಾ.ಆರತಿ ಕೃಷ್ಣ ಸುಮಾರು 12ವರ್ಷಗಳ ಕಾಲ ಅಮೇರಿಕಾದ ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಸೇವೆಸಲ್ಲಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹಾಗಾರರಾಗಿಯೂ ಸೇವೆ ಸಲ್ಲಿಸಿ 2012ರಲ್ಲಿ ಜನರ ಸೇವೆ ಮಾಡಲು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ನೇರವಾಗಿ ಧುಮುಕಿದರು. ಪ್ರಪಂಚದಾದ್ಯಂತ ಪಸರಿಸಿರುವ ಅನಿವಾಸಿ ಭಾರತೀಯರ ಸಮಾವೇಶಗಳಲ್ಲಿ ಭಾಗವಹಿಸಿ ಅವರ ಧ್ವನಿಯಾಗಿ ಸೇವೆ ಸಲ್ಲಿಸಿದ್ದ ಆರತಿಯವರನ್ನು ಗುರುತಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016ರಲ್ಲಿ ಸಂಪುಟ ದರ್ಜೆಯ ಹುದ್ದೆಯಾದ ಕರ್ನಾಟಕ ಎನ್ಆರ್ಐ ಫಾರಂ ನ ಉಪಾಧ್ಯಕ್ಷರಾಗಿ ಆರತಿಯವರನ್ನು ನೇಮಿಸಿತು. ಆ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳನ್ನು ಒಳಗೊಂಡಂತೆ ಹಲವಾರು ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುದಷ್ಟೇ ಅಲ್ಲ ಸರಕಾರ ಹಾಗೂ ಅನಿವಾಸಿ ಕನ್ನಡಿಗರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸಿದ ಅನುಭವ ಆರತಿಯವರಿಗಿದೆ.

ಸಧ್ಯಕ್ಕೆ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ಸಿನ ಕಾರ್ಯದರ್ಶಿಯಾಗಿಯೂ, ಕೆಪಿಸಿಸಿ ಎನ್ಆರ್ಐ ಸೆಲ್ ನ ಅಧ್ಯಕ್ಷೆಯಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿರುವ ಆರತಿ ಕಳೆದ ಹಲವಾರು ವರ್ಷಗಳಿಂದ ಕೃಷ್ಣ ಫೌಂಡೇಶನ್ ಎಂಬ ಎನ್.ಜಿ.ಓ ಸ್ಥಾಪಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಅಭಿವೃದ್ಧಿಗಾಗಿ ತಮ್ಮ ಸ್ವಂತ ಖರ್ಚಿನಿಂದಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರಕ್ಕೆ ಇವರ ಹೆಸರು ಕೇಳಿ ಬರುತ್ತಿದ್ದಗಲೂ ಬೇಡವೆಂದೇ ನಿರಾಕರಿಸಿದ್ದ ಆರತಿ ಈ ಬಾರಿ ಇಂದಿರಾ ಗಾಂಧಿಯವರಿಗೆ ಪುನರ್ಜನ್ಮ ನೀಡಿದ ಕ್ಷೇತ್ರದಿಂದ ಸಂಸತ್ ಪ್ರವೇಶಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಸಂಭಾವ್ಯರ ಪಟ್ಟಿಯಲ್ಲಿ ಇವರ ಹೆಸರೇ ಮುಂಚೂಣಿಯಲ್ಲಿದೆ.

ರಾಜತಾಂತ್ರಿಕ ವ್ಯವಹಾರಗಳ ತಜ್ಞೆಯಾಗಿಯೂ, ಅನಿವಾಸಿ ಕಾಂಗ್ರೆಸ್ ಸಮಾವೇಶಗಳ ಹಿಂದಿನ ಶಕ್ತಿಯಾಗಿಯೂ ರಾಹುಲ್ ಗಾಂಧಿಯವರಿಂದಲೇ ಪ್ರಶಂಸಿಸಲ್ಪಟ್ಟ ಆರತಿಯವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇರುವ ಅತಿ ಹೆಚ್ಚು ಒಕ್ಕಲಿಗರ ಜಾತಿ ಬಲ, ರಾಜ್ಯ ಮೈತ್ರಿ ಸರ್ಕಾರದ ಪಾಲುದಾರ ಜೆಡಿಎಸ್ ನ ವರಿಷ್ಠ ದೇವೇಗೌಡರ ಬೆಂಬಲ ಹಾಗೂ ಕರ್ನಾಟಕ ಕಾಂಗ್ರೆಸ್ ನ ಮಹಿಳಾ ಆಕಾಂಕ್ಷಿಗಳ ಕೋಟದಲ್ಲಿಯೂ ಪ್ರಬಲವಾದ ಹೆಸರು ಇವೆಲ್ಲವೂ ಟಿಕೆಟ್ ದೊರೆಯಲು ಮತ್ತಷ್ಟು ಸಹಕಾರಿಯಾಗಬಲ್ಲ ಅಂಶಗಳು. ಕೆಲವೇ ದಿನಗಳಲ್ಲಿ ಘೋಷಣೆಯಾಗಲಿರುವ ಟಿಕೆಟ್ ತೀವ್ರ ಕುತೂಹಲಕ್ಕೆ ಎಡೆಮಾಡಿದೆ.

Leave a Reply

Your email address will not be published. Required fields are marked *