ಜಮ್ಮುವಿನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಗ್ರೆನೇಡ್ ದಾಳಿಗೆ 28 ಜನರು ಗಾಯ
ನ್ಯೂಸ್ ಕನ್ನಡ ವರದಿ: ಪುಲ್ವಾಮಾ ಉಗ್ರರ ದಾಳಿ ನಂತರ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿದ್ದರೂ, ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಜಮ್ಮುವಿನ ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಉಗ್ರರು ಬಸ್ವೊಂದರ ಬಳಿ ಗ್ರೆನೇಡ್ ಎಸೆದು ಅದು ಸ್ಪೋಟಗೊಂಡ ಪರಿಣಾಮ ಹಲವು ಪ್ರಯಾಣಿಕರು ತೀವ್ರ ಗಾಯಗೊಂಡಿದ್ದಾರೆ. ಗಾಯಾಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳದಲ್ಲಿ ಹಾಜರಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಮೇಲೆ ಬೈಕ್ನಲ್ಲಿ ಬಂದ ಉಗ್ರರು ಗ್ರೆನೇಡ್ ಎಸೆದು ಪರಾರಿಯಾದರು. ಅದು ಸ್ಫೋಟಗೊಂಡು 16ಪ್ರಯಾಣಿಕರು ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪರಾರಿಯಾಗಿರುವ ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಜಮ್ಮುವಿನಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಸ್ಫೋಟದಿಂದ ಬಸ್ನ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಹಿರಿಯ ಪೊಲೀಸ್ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ದಾಳಿಯಿಂದ ಜಮ್ಮು ಬಸ್ ನಿಲ್ದಾಣದ ಸುತ್ತಮುತ್ತ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.