ಲೋಕಸಭೆ ಚುನಾವಣೆಯ ದಿನಾಂಕ ನಿಗದಿ! : ಸಂಜೆ 5 ಗಂಟೆಗೆ ಚುನಾವಣಾ ಆಯೋಗದಿಂದ ಪತ್ರಿಕಾಗೋಷ್ಠಿ !

ನ್ಯೂಸ್ ಕನ್ನಡ ವರದಿ : ಬಹುನಿರೀಕ್ಷಿತ 2019ರ ಲೋಕಸಭಾ ಚುನಾವಣೆ ದಿನಾಂಕವನ್ನು ಇಂದು ಘೋಷಣೆ ಮಾಡುವ ಸಾಧ್ಯತೆ ಇದ್ದು, ಸಂಜೆ 5 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಆಯೋಜಿಸಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಗ ಮುಖ್ಯ ಆಯುಕ್ತ ಸುನೀಲ್​ ಅರೋರ ಸುದ್ದಿಗೋಷ್ಠಿ ಆಯೋಜಿಸಿದ್ದಾರೆ.

ಏಪ್ರಿಲ್​​ ಮೊದಲ ವಾರದಿಂದ ಕೊನೆಯವರೆಗೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇನ್ನು ಈಗಾಗಲೇ ಇವಿಎಂ, ವಿವಿಪ್ಯಾಟ್ ಹಾಗೂ ಚುನಾವಣಾ ಪ್ರಕ್ರಿಯೆಗೆ ಬೇಕಾದ ಸಾಧನಗಳು ಸಿದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ಹಿಂದಿನ 2014ರ ಲೋಕಸಭಾ ಚುನಾವಣೆಗೆ ಮಾರ್ಚ್​ 5ನೇ ತಾರೀಖಿನಂದು ದಿನಾಂಕ ಘೋಷಿಸಲಾಗಿತ್ತು. 17ನೇ ಸಾರ್ವತ್ರಿಕ ಲೋಕಸಭೆ ಚುನಾವಣೆ ಸುಮಾರು 7ರಿಂದ 8 ಹಂತದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಡೆಸಲಾಗಿತ್ತು. ಇಂದು ಚುನಾವಣೆಗೆ ದಿನಾಂಕ ನಿಗದಿಯಾದರೆ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.

ಇನ್ನು ಲೋಕಸಭೆ ಚುನಾವಣೆ ಜೊತೆಗೆ ಚುನಾವಣಾ ಆಯೋಗ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ಸಹ ಅವಧಿಗೆ ಮುನ್ನ ಚುನಾವಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಯಾಗಿರುವುದರಿಂದ 6 ತಿಂಗಳೊಳಗೆ ಅಂದರೆ ಮೇ ತಿಂಗಳೊಳಗೆ ಹೊಸದಾಗಿ ಚುನಾವಣೆ ನಡೆಸಬೇಕು. ಲೋಕಸಭೆ ಚುನಾವಣೆ ಜೊತೆಯಲ್ಲಿಯೇ ಜಮ್ಮು-ಕಾಶ್ಮೀರ ಎಲೆಕ್ಷನ್ ನಡೆಸಲು ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ಸದ್ಯಕ್ಕೆ ಇರುವುದು ಕೂಡ ಚುನಾವಣಾ ಆಯೋಗಕ್ಕೆ ತೊಂದರೆಯಾಗಿದೆ.

Leave a Reply

Your email address will not be published. Required fields are marked *