ಡಿ.ಕೆ.ಶಿ ಭೇಟಿಯ ನಂತರವೂ ಬಹಿರಂಗವಾಗಿಯೇ ಸುಮಲತಾ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕರು!

ನ್ಯೂಸ್ ಕನ್ನಡ ವರದಿ: ರಾಜ್ಯಾದ್ಯಂತ ಸುದ್ದಿಯಾಗಿರುವ ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸುಮಲತಾ ಅವರಿಗೆ ಒಳಗೊಳಗೆ ಬೆಂಬಲ ನೀಡುತ್ತಿದ್ದ ಜಿಲ್ಲೆ ಹಿರಿಯ ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆಗಳ ಮೂಲಕವೇ ಬೆಂಬಲ ನೀಡಲು ಮುಂದಾಗಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಅವರು ಬಹಿರಂಗವಾಗಿಯೇ ಸುಮಲತಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಅಂಬರೀಶಣ್ಣನ ಜತೆಗಿದ್ದಾರೆ. ಸುಮಲತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾವು ಕೊನೆ ಕ್ಷಣದವರೆಗೂ ಕಾದು ನೋಡುತ್ತೇವೆ ಎಂದಿದ್ದಾರೆ.

ಜಿಲ್ಲೆಗೆ ಹೊರಗಿನಿಂದ ಬಂದು ಸ್ಪರ್ಧಿಸುವ ಅಭ್ಯರ್ಥಿ ಪರವಾಗಿ ಮತ ಕೇಳಲು ಹೋದರೆ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಈ ಕ್ಷಣದವರೆಗೂ ಕಾಂಗ್ರೆಸ್ ಸುಮಲತಾ ಅವರಿಗೆ ಟಿಕೆಟ್ ನೀಡಲಿದೆ ಎಂದು ನಾವು ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಿದ್ದೇವೆ.ಒಂದು ವೇಳೆ ಸುಮಲತಾ ಅವರಲ್ಲದೆ ಹೊರಗಿನಿಂದ ಬಂದ ಬೇರೆ ಯಾರೇ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ನಾವು ಮುಂದಾದರೆ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ಕೊಡುವುದಿಲ್ಲ. ಸ್ಥಳೀಯರನ್ನು ಎದುರು ಹಾಕಿಕೊಂಡು ನಾವು ರಾಜಕಾರಣ ಮಾಡಲು ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದರೂ ಕೂಡ ಸ್ಥಳೀಯ ಕಾರ್ಯಕರ್ತರು ಮಾತುಕೇಳುವುದಿಲ್ಲ. ಹೀಗಾಗಿ ಜಿಲ್ಲೆಯ ಕಾರ್ಯಕರ್ತರ ಮನವೊಲಿಸುವುದು ಕಷ್ಟ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಕೂಡ ಅಂಬರೀಶ್ ಬಗ್ಗೆ ಅಪಾರ ಅಭಿಮಾನವಿದೆ. ಹೀಗಾಗಿ ಮಂಡ್ಯ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟುಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಈವರೆಗೂ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂಬ ಗುಸುಗುಸು ಕೇಳಿ ಬರುತ್ತಿತ್ತು. ಪ್ರಸನ್ನಕುಮಾರ್ ಅವರ ಬಹಿರಂಗ ಹೇಳಿಕೆಯ ಮೂಲಕ ಅದು ಸ್ಪಷ್ಟವಾಗಿದೆ.

ತೆರೆಮರೆಯ ಬದಲಾಗಿ ನೇರವಾಗಿಯೇ ಕಾಂಗ್ರೆಸ್ ಮುಖಂಡರು ಸುಮಲತಾ ಅವರ ಹೆಸರನ್ನು ಪ್ರಸ್ತಾಪಿಸಲು ಆರಂಭಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗುತ್ತಿದ್ದು, ಅವರನ್ನು ಗೆಲ್ಲಿಸಲು ಮೈತ್ರಿ ಪಕ್ಷದ ನಾಯಕರು ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ, ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಲಾರಂಭಿಸಿದ್ದಾರೆ. ಸುಮಲತಾ ಅವರಿಗೆ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಬೆಂಬಲ ನೀಡುತ್ತಾರೆ ಎಂಬ ಆರೋಪಗಳಿದ್ದವು. ಆದರೆ, ಸಿದ್ದರಾಮಯ್ಯ ಅವರು ನೇರವಾಗಿ ಸುಮಲತಾ ಅವರು ಕಾಂಗ್ರೆಸ್ ಅಭ್ಯರ್ಥಿ ಅಲ್ಲ ಎಂದು ಹಲವಾರು ಬಾರಿ ಸ್ಪಷ್ಟಪಡಿಸುವ ಮೂಲಕ ತಮ್ಮ ನಿಲುವನ್ನು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *