ಮೈಸೂರು ಕ್ಷೇತ್ರ ನಮಗೆ ಬಿಟ್ಟುಕೊಡಲೇ ಬೇಕು!: ದೇವೇಗೌಡರಿಂದ ಕಾಂಗ್ರೆಸ್ ಹೈಕಮಾಂಡ್ ಗೆ ನೇರ ಷರತ್ತು

ನ್ಯೂಸ್ ಕನ್ನಡ ವರದಿ: ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡದಿದ್ದರೆ ಸ್ಪರ್ಧಾ ಕಣದಿಂದಲೇ ಹಿಂದೆ ಸರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ. ಮೈಸೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡಿ. ನಾನು ಅಲ್ಲಿಂದಲೇ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿಯುತ್ತೇನೆ. ಒಂದು ವೇಳೆ ಮೈಸೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡದಿದ್ದರೆ ಚುನಾವಣಾ ಕಣಕ್ಕೇ ಇಳಿಯುವುದಿಲ್ಲ ಎಂದು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದಾರೆ.

ದೇವೇಗೌಡರು ಮೈಸೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಪಕ್ಷದ ಮೇಲೆ ಈ ಮಟ್ಟದ ಒತ್ತಡ ಹೇರುತ್ತಿರುವುದರ ಹಿಂದೆ ಹಲವು ಮಹತ್ವದ ಕಾರಣಗಳಿವೆ. ಮೊದಲನೆಯದಾಗಿ,ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಯಾವ ಕಾರಣಕ್ಕೂ ಜೆಡಿಎಸ್ ಅನ್ನು ಸೋಲಿಸಲು ಮುಂದಾಗುವುದಿಲ್ಲ ಎಂಬುದು ದೇವೇಗೌಡರ ಲೆಕ್ಕಾಚಾರ. ಒಂದು ವೇಳೆ ಸಿದ್ಧರಾಮಯ್ಯ ಅವರ ಜಿಲ್ಲೆಯಲ್ಲೇ ಜೆಡಿಎಸ್ ಸೋಲು ಕಂಡರೆ ಅದರ ಹೊಣೆಯನ್ನು ಸಿದ್ಧರಾಮಯ್ಯ ಅವರ ವಿರುದ್ಧ ಹೊರಿಸುವುದು ಸುಲಭ. ಸಿದ್ಧರಾಮಯ್ಯ ಅವರಿದ್ದೂ ಮೈತ್ರಿ ಕ್ಯಾಂಡಿಡೇಟ್ ಸೋತರೆ ಅದರ ನೈತಿಕ ಹೊಣೆಯನ್ನು ಅವರು ಹೊರಬೇಕಾಗುತ್ತದೆ. ಹಾಗೇನಾದರೂ ಆದರೆ ಲೋಕಸಭಾ ಚುನಾವಣೆಯ ನಂತರ ನಮ್ಮ ದಾರಿ ನಮಗೆ ಎಂದು ಕಾಂಗ್ರೆಸ್ ವರಿಷ್ಟರಿಗೆ ಹೇಳುವುದು ಮಾತ್ರವಲ್ಲ, ಕರ್ನಾಟಕದ ರಾಜಕೀಯ ಚಿತ್ರಣವನ್ನು ಬದಲು ಮಾಡಲು ದೇವೇಗೌಡರು ಮುಂದಾಗುವುದೂ ಅಸಹಜವಲ್ಲ.

ಒಂದು ವೇಳೆ ತಾವು ಕಣಕ್ಕಿಳಿಯದೆ ಹೋದರೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಅನ್ನು ಸೋಲಿಸಲು ಬೇರೆ ಮಾರ್ಗಗಳಿಲ್ಲ. ಕಾಂಗ್ರೆಸ್‍ನಿಂದ ವಿಜಯಶಂಕರ್ ಸ್ಪರ್ಧಿಸಿದರೂ ಜೆಡಿಎಸ್ ಮತಗಳು ಕಳೆದ ಬಾರಿಯಂತೆಯೇ ಬಿಜೆಪಿ ಕಡೆ ವಾಲಬಹುದು. ಹಾಗೇನಾದರೂ ಆದರೆ ಅದು ತಮ್ಮ ವರ್ಚಸ್ಸಿಗೆ ಧಕ್ಕೆ. ಹೀಗಾಗಿ ಯಾವ ಕಾರಣಕ್ಕೂ ಈ ಬೆಳವಣಿಗೆ ನಡೆಯಲು ಅವಕಾಶ ನೀಡಬಾರದು ಎಂಬುದು ದೇವೇಗೌಡರ ಲೆಕ್ಕಾಚಾರ.ಒಂದು ವೇಳೆ ತಮ್ಮ ಲೆಕ್ಕಾಚಾರಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಡೆದುಕೊಂಡರೆ ಲೋಕಸಭಾ ಚುನಾವಣೆಯ ನಂತರದ ಬೆಳವಣಿಗೆಗಳು ಏನೂ ಆಗಬಹುದು ಎಂದವರು ಕಾಂಗ್ರೆಸ್ ಹೈಕಮಾಂಡ್ ವರಿಷ್ಟರಿಗೆ ಹೇಳಿದ್ದಾರೆ.

Leave a Reply

Your email address will not be published. Required fields are marked *