ಅನುಭವ ಇಲ್ಲದವರನ್ನು ಏಕಾಏಕಿ ಹೆಡ್ ಮಾಸ್ಟರ್ ಮಾಡಿದ್ರೆ ಜನ ಒಪ್ತಾರಾ?: ಪ್ರಜ್ವಲ್ ಗೆ ಮಂಜು ಟಾಂಗ್

ನ್ಯೂಸ್ ಕನ್ನಡ ವರದಿ : ಹಾಸನದ ಗಾಂಧಿಬಜಾರ್‌ನ ನೀರುಬಾಗಿಲು ಆಂಜನೇಯ ದೇಗುಲದ ಬಾಗಿಲು ತೆರೆಸಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ಎ.ಮಂಜು ಸುದ್ದಿಗಾರರೊಂದಿಗೆ ಮಾತನಾಡಿ ”ಅನುಭವ ಇಲ್ಲದೆ, ಏಕಾಏಕಿ ಹೆಡ್ಮಾಸ್ಟರ್‌ ಆಗೋಕೆ ಹೋದ್ರೆ ಜನ ಒಪ್ಪಲ್ಲ. ಅದಕ್ಕಿಂತ ಮುಖ್ಯವಾಗಿ ಪ್ರಜ್ವಲ್‌ ರೇವಣ್ಣ ಅಭ್ಯರ್ಥಿಯಾಗುವುದೇ ಅನುಮಾನ. ಎರಡು ದಿನದಲ್ಲಿ ಏನೆಲ್ಲ ರಾಜಕೀಯ ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದುನೋಡಿ” ಎನ್ನುವ ಮೂಲಕ ತಾವು ಬಿಜೆಪಿ ಸೇರುವ ಬಗ್ಗೆ ಸುಳಿವು ನೀಡಿದರು.

ರಾಜಕಾರಣ ನಿಂತ ನೀರಲ್ಲ ಎನ್ನುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ ಎ.ಮಂಜು, ”1991ರಲ್ಲಿ ದೇವೇಗೌಡರು ನನ್ನ ಸಹಕಾರದಿಂದ ಸಂಸದರಾಗಿದ್ದರು. ನಾವು ಅವರಿಗೆ ಸಹಾಯ ಮಾಡಿದ್ದೀವಿ. ಈಗ ಮೊಮ್ಮಗನ ವ್ಯಾಮೋಹ ಬಿಟ್ಟು ತನ್ನನ್ನು ಆಶೀರ್ವದಿಸಲಿ ನೋಡೋಣ” ಎಂದು ಸವಾಲು ಹಾಕಿದರು. ದೇವೇಗೌಡರು ಮೈತ್ರಿ ಉಪಯೋಗಿಸಿಕೊಂಡು ರಾಜಕೀಯವಾಗಿ ತನ್ನ ಕುಟುಂಬದ ಅಸ್ತಿತ್ವ ಗಟ್ಟಿ ಗೊಳಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಬಿಟ್ಟರೆ ರಾಜ್ಯ, ಜಿಲ್ಲೆಯ ಒಳಿತಿಗೆ ಯಾವು ಕೆಲಸನೂ ನಡೆಯುತ್ತಿಲ್ಲ ಎಂಬ ನೋವಿದೆ” ಎಂದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ. ತನ್ನ ರಾಜಕೀಯ ಗುರುಗಳು, ಒಡನಾಡಿಗಳು, ಕಾರ್ಯಕರ್ತರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಅದುವರೆಗೆ ಏನೆಲ್ಲ ರಾಜಕೀಯ ಬೆಳವಣಿಗೆ ನಡೆಯುತ್ತದೆ ಎಂಬುದನ್ನು ಕಾದುನೋಡಿ” ಎಂದರು.

Leave a Reply

Your email address will not be published. Required fields are marked *