ಕಾಂಗ್ರೆಸ್ ಕಟ್ಟಾ ಅಭಿಮಾನಿ ನನ್ನ ತಂದೆ ನನಗೆ ಮತ ನೀಡಿದ್ದರೋ ನನಗೆ ಗೊತ್ತಿಲ್ಲ!: ಅನಂತ್ ಕುಮಾರ್
ನ್ಯೂಸ್ ಕನ್ನಡ ವರದಿ: ತಮ್ಮ ಕೋಮು ಪ್ರಚೋದಕ ಭಾಷಣ, ಹಾಗೂ ವಿವಾದಾತ್ಮಕ ಹೇಳಿಕೆ ಗಳಿಂದ ಯಾವತ್ತೂ ಸುದ್ದಿಯಲ್ಲಿರುವ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತ್ ಕುಮಾರ್ ಹೆಗ್ಡೆ ಒಂದು ಅಪರೂಪದ ವಿಷಯವನ್ನು ಹಂಚಿಕೊಂಡಿದ್ದು, ಆ ಮೂಲಕ ವಿಶೇಷ ರೂಪದಲ್ಲಿ ಪರೋಕ್ಷವಾಗಿ ಮೋದಿಯವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ನಮ್ಮ ಮನೆಯಲ್ಲಿ ಬಿಜೆಪಿಗೆ ವೋಟು ಹಾಕುವುದೇ ಗೊತ್ತಿರಲಿಲ್ಲ. ನನ್ನ ತಂದೆ ಕಟ್ಟರ್ ಕಾಂಗ್ರೆಸ್ಸಿಗ, ನನಗೆ ಬಿಜೆಪಿಯಿಂದ ಲೋಕಸಭಾ ಟಿಕೆಟ್ ಸಿಕ್ಕಾಗ ಮನೆಯಲ್ಲಿ ಬೈದಿದ್ದರು. ನಮ್ಮ ಪೂರ್ವಿಕರು ಸ್ವಾತಂತ್ರ್ಯ ಹೋರಾಟದ ವೇಳೆ ಕಾಂಗ್ರೆಸ್ ಜೊತೆಗೆ ಬಂದವರು. ಹೀಗಾಗಿ ನೀನು ಕಾಂಗ್ರೆಸ್ ಬಿಟ್ಟು ಹೋಗಿದ್ದೀಯ ಅಂದ್ರೆ ಅದು ನಮ್ಮ ಮನೆತನಕ್ಕೆ ಕಳಂಕವೆಂದು ದೂರಿದ್ದರು ಎಂದು ಅನಂತ್ ಕುಮಾರ್ ಹೇಳಿದ್ದಾರೆ.
ನಾನು ಕಳೆದ 5 ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧಿಸುತ್ತಿದ್ದರೂ ನನ್ನ ತಂದೆ ನನಗೆ ಮತ ಹಾಕಿದ್ದಾರೋ ಗೊತ್ತಿಲ್ಲ, ಆದರೆ ಈ ಬಾರಿ ನನ್ನ ಬಳಿಗೆ ಬಂದು ಬಿಜೆಪಿಗೆ ವೋಟು ಹಾಕುತ್ತೇನೆ. ಆದರೆ ನಿನ್ನನ್ನ ನೋಡಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ನೋಡಿ ಎಂದರು. ಆಗ ನಾನು, ಅಷ್ಟಾದರೂ ದೇವರು ಬುದ್ಧಿ ಕೊಟ್ಟಿದ್ದಾನಲ್ಲ ಎಂದು ಅವರಿಗೆ ಕೈ ಮುಗಿದೆ ಮೋದಿ ಆಡಳಿತದಲ್ಲಿ ಆದ ಬದಲಾವಣೆ ಇದು ಹೇಳಿದರು.