ಸುಪ್ರೀಂ ಕೋರ್ಟ್ ಗಡುವಿನ ಮುನ್ನ ದಿನ ಸಾಲ ಪಾವತಿಸಿದ ಅನಿಲ್ ಅಂಬಾನಿ! ಅವರಿಗೆ ಸಹಾಯ ಮಾಡಿದ್ಯಾರು ಗೊತ್ತೇ?

ನ್ಯೂಸ್ ಕನ್ನಡ ವರದಿ : ಅನಿಲ್ ಅಂಬಾನಿ ಒಡೆತನದ ರೆಲ್.ಕಾಂ ಸಂಸ್ಥೆ ದಿವಾಳಿ ಅಂಚಿಗೆ ಬಂದು ನಿಂತಿದೆ. ಮಾಡಿದ ಸಾಲ ತೀರಿಸಲು ಅನಿಲ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಮಾರಲು ಮುಂದಾಗಿರುವ ಅನಿಲ್ ಅಂಬಾನಿ, ನ್ಯಾಶನಲ್ ಕಂಪನಿ ಲಾ ಟ್ರಿಬ್ಯುನಲ್ ಮೊರೆ ಹೋಗಿದ್ದರು. ಇನ್ನು ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣ ತಯಾರಿಕಾ ಸಂಸ್ಥೆ ಎರಿಕ್‌ಸನ್‌ ಕಂಪನಿಗೆ ಅನಿಲ್ ಅಂಬಾನಿ 550 ಕೋಟಿ ರೂ. ಹಣ ನೀಡದಿರುವ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಾಲ್ಕು ವಾರಗಳೊಳಗೆ ಎರಿಕ್‌ಸನ್‌ ಕಂಪನಿಗೆ 453 ಕೋಟಿ ರೂ. ಪಾವತಿಸಿ ಇಲ್ಲವೇ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಎಂದು 2019ರ ಫೆ.20 ರಂದು ಅನಿಲ್‌ ಅಂಬಾನಿಗೆ ಖಡಕ್ ಆದೇಶ ನೀಡಿತ್ತು. ಇನ್ನು ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮೊದಲೇ ಸ್ವೀಡನ್‌ ಮೂಲದ ಎರಿಕ್‌ಸನ್‌ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ.ಗಳ ಸಂಪೂರ್ಣ ಸಾಲವನ್ನು ಅನಿಲ್ ಅಂಬಾನಿ ಪಾವತಿಸಿದ್ದಾರೆ. ಈ ಕಾರ್ಯಕ್ಕೆ ಅನಿಲ್ ಅಂಬಾನಿ ಬೆನ್ನಿಂದೆ ಅವರ ಸಹೋದರ ಮುಕೇಶ್ ಅಂಬಾನಿ ಮತ್ತು ಅತ್ತಿಗೆ ನೀತಾ ಅಂಬಾನಿ ಇರುವುದು.

ಅಣ್ಣ-ಆತ್ತಿಗೆ ಈ ಸಹಾಯಕ್ಕಾಗಿ ಅನಿಲ್ ಅಂಬಾನಿ ಕೃತಜ್ಞತೆ ಸಲ್ಲಿಸಿದ್ದು, “ನನ್ನ ಗೌರವಾನ್ವಿತ ಅಣ್ಣ ಮುಕೇಶ್ ಮತ್ತು ಅತ್ತಿಗೆ ನೀತಾ ಅವರಿಗೆ ನನ್ನ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಧನ್ಯವಾದಗಳು. ನನ್ನ ಕಷ್ಟದ ಸಮಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತು, ನಮ್ಮ ನಡುವಿನ ಬಲಿಷ್ಠ ಕೌಟುಂಬಿಕ ಬಾಂಧವ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿದು, ನನಗೆ ಸಕಾಲಕ್ಕೆ ನೆರವಿಗೆ ಬಂದ ಅವರಿಗೆ ನಾನು ಚಿರಋಣಿ. ಈ ಹಿಂದೆಯೂ ನನ್ನ ಕಷ್ಟದಲ್ಲಿ ಮುಕೇಶ್ ನೆರವಾಗಿದ್ದಾರೆ. ಅವರ ಹೃದಯ ವೈಶಾಲ್ಯತೆಗೆ ನನ್ನ ಮನ ತುಂಬಿ ಬಂದಿದೆ” ಎಂದು ತಿಳಿಸಿರುವುದಾಗಿ ಕಂಪನಿಯ ವಕ್ತಾರರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹೇಳಲಾಗಿದೆ. ಇನ್ನು ಸಹೋದರ ಬೆನ್ನೆಲುಬಾಗಿ ಸಹಕರಿಸಿದರಿಂದ ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮೊದಲೇ ಸ್ವೀಡನ್‌ ಮೂಲದ ಎರಿಕ್‌ಸನ್‌ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ.ಗಳ ಸಂಪೂರ್ಣ ಸಾಲವನ್ನು ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ (ADAG) ಮುಖ್ಯಸ್ಥ ಅನಿಲ್‌ ಅಂಬಾನಿ ಪಾವತಿಸಿದ್ದಾರೆ.

Leave a Reply

Your email address will not be published. Required fields are marked *