ಪ್ರೀಯಾಂಕ ಗಾಂಧಿಯ ಭಯವೇ ಮಾಯಾವತಿ ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣ!: ಶಿವಸೇನೆ
ನ್ಯೂಸ್ ಕನ್ನಡ ವರದಿ : ಲೋಕಸಭಾ ಚುನಾವಣೆ ಸ್ಪರ್ಧಾಕಣದಿಂದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹಿಂದೆ ಸರಿದಿದ್ದಾರೆ. ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಕ್ಕಿಂತ ಎಸ್ಪಿ-ಬಿಎಸ್ಪಿ ಮೈತ್ರಿ ಹೆಚ್ಚಿನ ಸೀಟು ಗೆಲ್ಲಬೇಕಿದೆ. ಮೈತ್ರಿಕೂಟದ ಯಶಸ್ಸಿಗಿಂತ ವೈಯಕ್ತಿಕ ಸ್ಪರ್ಧೆ ಮುಖ್ಯವಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ’ ಎಂದು ಬುಧವಾರ ಮಾಯಾವತಿ ಘೋಷಿಸಿದ್ದಾರೆ. ಇನ್ನು ಇದರಂತೆಯೇ ಶರದ್ ಪವಾರ್ ಕೂಡ ಹಿಂದೆ ಸರಿದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ, ಮಾಯಾವತಿ, ಪ್ರಧಾನಿ ಹುದ್ದೆಯ ಸ್ಪರ್ಧೆಯಲ್ಲಿದ್ದರು. ಎನ್ಸಿಪಿ ಮುಖಂಡ ಶರದ್ ಪವಾರ್ ಅವರು ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸಲು ಯತ್ನಿಸುತ್ತಿದ್ದಾರೆ. ಆದರೆ ಅವರ ಕುಟುಂಬ ಮತ್ತು ಪಕ್ಷದ ಸದಸ್ಯರಲ್ಲಿ ಒಕ್ಕೂಟವನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಾಮ್ನಾದಲ್ಲಿ ಟೀಕಿಸಿದೆ.
2014ರಲ್ಲಿ ದಲಿತರು ಮತ್ತು ಯಾದವರು ಹೆಚ್ಚಿನ ಸಂಖ್ಯೆಯಲ್ಲಿ ಮೋದಿಗೆ ಮತ ಚಲಾಯಿಸಿದ್ದಾರೆ. ಹಾಗಾಗಿ ಮಾಯಾವತಿಯ ಏಕೈಕ ಅಭ್ಯರ್ಥಿಯು ಗೆಲುವು ಸಾಧಿಸಿಲ್ಲ ಎಂಬ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿಕೆಯನ್ನು ಉಲ್ಲೇಖಿಸಿರುವ ಶಿವಸೇನೆ, ಅಂದಿನ ಭಯ ಇಂದಿಗೂ ಮಾಯಾವತಿ ಅವರನ್ನು ಕಾಡುತ್ತಿದೆ. ಹಾಗಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮಾಯಾವತಿ ಎಲ್ಲೇ ಸ್ಪರ್ಧಿಸಿದರು ಕಾಂಗ್ರೆಸ್ ಮುಳ್ಳಾಗಲಿದೆ. ಮಾಯಾವತಿ ಸ್ಪರ್ಧೆಯಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದಾಗಿದೆ ಎಂದಿದೆ.