ಯಡಿಯುರಪ್ಪನವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ!: ಶೋಭಾ ಕರಂದಾಜ್ಲೆ
ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಇಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್ ಯಡಿಯುರಪ್ಪ ವಿರುದ್ಧ 1800 ಕೋಟಿ ರೂಪಾಯಿಗಳ ಡೈರಿ ಹಗರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದು, ಯಡಿಯುರಪ್ಪ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ ಎಂದೇ ಭಾವಿಸಲಾಗಿದ್ದು, ಇದೇ ಸಂದರ್ಭದಲ್ಲಿ ಅವರ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದಾಜ್ಲೆ, ‘ಯಡಿಯೂರಪ್ಪ ಅವರಿಗೆ ಡೈರಿ ಬರೆಯುವ ಅಭ್ಯಾಸವೇ ಇಲ್ಲ. ಕಾಂಗ್ರೆಸ್ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ, ಡೈರಿಯನ್ನು ಕಾಂಗ್ರೆಸ್ನವರೇ ಬರೆದಿದ್ದಾರೆ. ಅವರೇ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಿ.ಎಸ್.ಯಡಿಯೂರಪ್ಪ ಅವರ ಸಹಿಯನ್ನು ನಕಲಿ ಮಾಡಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ, ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಲಿದೆ, ಅದೇ ಕಾರಣಕ್ಕೆ ಅವರು ಈ ರೀತಿ ಆರೋಪ ಹೊರಿಸುತ್ತಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮುಗಿದು 6-7 ವರ್ಷಗಳೇ ಕಳೆದಿವೆ. ಆದರೆ ಈಗ ಡೈರಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಇಷ್ಟು ದಿನದ ಇಲ್ಲದ ಆರೋಪ ಈಗ ಮಾಡಿದ್ದು ಯಾಕೆ? ಇದೆಲ್ಲಾ ಜನರ ದಿಕ್ಕು ತಪ್ಪಿಸುವ ಬಾಲಿಶ ಪ್ರಯತ್ನ ಎಂದು ಶೋಭಾ ಕರಂದಾಜ್ಲೆ ಹೇಳಿದರು.