ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿ ರಾಹುಲ್ ಕ್ಷಮೆ ಕೇಳಲಿ: ಅಮಿತ್ ಶಾ ಒತ್ತಾಯ
ನ್ಯೂಸ್ ಕನ್ನಡ ವರದಿ : ಏರ್ ಸ್ಟ್ರೈಕ್ ನಡೆದಿದ್ದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ, “ಏರ್ ಸ್ಟ್ರೈಕ್ ನಲ್ಲಿ 300 ಜನರನ್ನು ಕೊಂದಿದ್ದು ನಿಜಕ್ಕೂ ಹೌದೇ? 26/11 ರ ಮುಂಬೈ ಸ್ಫೋಟ ಮಾಡಿದ್ದು ಏಳೆಂಟು ಭಯೋತ್ಪಾದಕರು. ಅದಕ್ಕಾಗಿ ಇಡೀ ಪಾಕಿಸ್ತಾನವನ್ನು ದೂರುವುದು ತರವೇ?” ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಸಮಾಧಾನ ವ್ಯಕ್ತಪಡಿಸಿದ್ದರು. ‘ದಾಳಿಯ ಬಗ್ಗೆ ಶಂಕೆ ವ್ಯಕ್ತಪಡಿಸುವ ಮೂಲಕ ಪಿತ್ರೋಡಾ ಅವರು ಕಾಂಗ್ರೆಸ್ ಪರವಾಗಿ ಪಾಕಿಸ್ತಾನದ ರಾಷ್ಟ್ರೀಯ ದಿನಾಚರಣೆಗೆ ಚಾಲನೆ ನೀಡಿದ್ದಾರೆ’ ಎಂದು ಟೀಕಿಸಿದ್ದರು. ಇನ್ನು ಈ ಕುರಿತು ನವದೆಹಲಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅಮಿತ್ ಶಾ ಅವರು ಸ್ಯಾಮ್ ಪಿತ್ರೋಡಾ ಹೇಳಿಕೆಯನ್ನು ಖಂಡಿಸಿದಲ್ಲದೇ, ರಾಹುಲ್ ಗಾಂಧಿ ಅವರು ಈ ಹೇಳಿಕೆ ಕುರಿತು ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆಯನ್ನು ನೀಡಿತ್ತು. ‘ಹೇಳಿಕೆಯು ಪಿತ್ರೋಡಾ ಅವರ ವೈಯಕ್ತಿಕ ಅಭಿಪ್ರಾಯವೇ ವಿನಾಃ ಪಕ್ಷದ ನಿಲುವಲ್ಲ’ ಎಂದು ಹೇಳಿತ್ತು. ಆದರೂ ಕೂಡ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ದೇಶ ಎಲ್ಲವನ್ನು ನೋಡುತ್ತಿದೆ, ಈ ಹೇಳಿಕೆ ಮೂಲಕ ಭದ್ರತಾ ಪಡೆಗಳು ಮತ್ತು ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಇದಕ್ಕಾಗಿ ರಾಹುಲ್ ಗಾಂಧಿ ಅವರು ತಕ್ಷಣದ ದೇಶದ ಜನರ ಕ್ಷಮೆಯನ್ನು ಕೇಳಬೇಕು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಒತ್ತಾಯಿಸಿದ್ದಾರೆ.