ದೇವೇಗೌಡರಿಗೆ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವಂತೆ ನಾವು ವಿನಂತಿಸಿದ್ದೇವೆ: ಜಮೀರ್ ಅಹ್ಮದ್
ನ್ಯೂಸ್ ಕನ್ನಡ ವರದಿ:- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಒತ್ತಡ ಹಾಕಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದ್ದಾರೆ. ಇಂದು ಬೆಳಗ್ಗೆ ದೇವೇಗೌಡರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬೇರೆ ಯಾರೇ ಅಭ್ಯರ್ಥಿ ಸ್ಪರ್ಧೆ ಮಾಡಿದರೂ ಗೆಲ್ಲುವುದು ಕಷ್ಟವಾಗುವುದಿಲ್ಲ ಎಂಬುದನ್ನು ಗೌಡರ ಗಮನಕ್ಕೆ ತರಲಾಗಿದೆ ಎಂದರು.
ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ. ಆ ಸಂದರ್ಭದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ. ನಮ್ಮ ಒತ್ತಾಯದಂತೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗೌಡರು ಸ್ಪರ್ಧಿಸಿದರೆ ಭಾರೀ ಬಹುಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು. ಗೌಡರಿಗೆ ಎಲ್ಲ ಕ್ಷೇತ್ರಗಳಿಂದಲೂ ಸ್ಪರ್ಧೆ ಮಾಡುವಂತೆ ಒತ್ತಡವಿದೆ ಎಂದ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆಯೇ ಹೊರತು ಹೆಚ್ಚಿನ ಮಾಹಿತಿ ಇಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಸ್ಪರ್ಧಿಸುತ್ತಾರೆ ಎನ್ನುವುದು ಕೇವಲ ಊಹಾಪೋಹ ಎಂದು ಹೇಳಿದರು.