ಮೋದಿ ನಾಯಕತ್ವವನ್ನು ಇಡೀ ದೇಶವೇ ಒಪ್ಪಿದೆ, ಈ ಜುಜುಬಿ ಕುಮಾರಸ್ವಾಮಿ, ರೇವಣ್ಣ ಯಾವ ಲೆಕ್ಕ?: ಈಶ್ವರಪ್ಪ

ನ್ಯೂಸ್ ಕನ್ನಡ ವರದಿ : ರಾಜ್ಯದಲ್ಲಿ ಜೆಡಿಎಸ್ ಮುಖಂಡರ ಮನೆ ಕಚೇರಿ ಮೇಲೆ ಬೆಳಿಗ್ಗಂಬೆಳಿಗ್ಗೆ ಕೇಂದ್ರ ಸರ್ಕಾರ ಐಟಿ ದಾಳಿ ನಡೆಸಿದೆ. ಐಟಿ ದುರ್ಬಳಕೆ ಹಿನ್ನಲೆ ಆಕ್ರೋಶಗೊಂಡು ಕೇಂದ್ರ ಸರ್ಕಾರದ ವಿರುದ್ದ ಸಿಎಂ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ. ಈ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್​. ಈಶ್ವರಪ್ಪ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋದಕ್ಕೆ ಅಯೋಗ್ಯ ಅಂತ ಈಗ ಗೊತ್ತಾಗಿದೆ. ಪ್ರಧಾನ ಮಂತ್ರಿ ಬಗ್ಗೆ ಏಕವಚನದಲ್ಲಿ ಮಾತಾಡ್ತಾರೆ. ಸಿಎಂ ಹುಚ್ಚುಚ್ಚಾಗಿ ಮಾತಾಡೋದನ್ನು ಕಡಿಮೆ ಮಾಡಬೇಕು. ಸಿಎಂ ಸ್ಥಾನಕ್ಕೆ ಒಂದು ಗೌರವವಿದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಪ್ರಧಾನಿಗೆ ಯಾವೋನ್ರಿ ಅಂತ ಹೇಳಲು ಸಚಿವ ಎಚ್​.ಡಿ. ರೇವಣ್ಣನವರಿಗೆ ಎಷ್ಟು ಧೈರ್ಯ? ಯಾವೋನ್ರಿ ಅವನು ರೇವಣ್ಣ ಅಂತ ನಾನೂ ಹೇಳ್ಲಾ? ಅವರು ಸಚಿವರೆಂಬ ಗೌರವ ನಮಗಿದೆ. ಐಟಿ ಅಧಿಕಾರಿಗಳು ತಮ್ಮ ಕೆಲಸ ತಾವು ಮಾಡ್ತಾರೆ. ಅದಕ್ಕೆ ಬಾಯಿಗೆ ಬಂದ ಹಾಗೆ ಮಾತಾಡಬಾರದು ಎಂದು ಬಿಜೆಪಿ ನಾಯಕ ಕೆ.ಎಸ್​. ಈಶ್ವರಪ್ಪ ಹರಿಹಾಯ್ದಿದ್ದಾರೆ.

ಕುಮಾರಸ್ವಾಮಿಯವರಿಗೆ ತಾಕತ್ತಿದ್ದರೆ ಬೀದಿಗಿಳಿದು ಹೋರಾಟ ಮಾಡಲಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು, ರೇವಣ್ಣ ಲೋಕೋಪಯೋಗಿ ಸಚಿವರಾಗಲು ಅಯೋಗ್ಯರು. ಕಾಂಗ್ರೆಸ್​ನ ದುಷ್ಟರು ಜೆಡಿಎಸ್​ಗೆ ಬೆಂಬಲ‌ ನೀಡಿ ಅಧಿಕಾರ ಕೊಟ್ಟಿದ್ದಾರೆ. ಇನ್ನು ದೇವೇಗೌಡರ ಬಗ್ಗೆ ನನಗೆ ತುಂಬ ಗೌರವವಿದೆ. ಅವರು ಕುಮಾರಸ್ವಾಮಿಯವರಿಗೆ ಬುದ್ಧಿ ಹೇಳಬೇಕು. ಸುಮಲತಾ ಅಂಬರೀಷ್​ಗೆ ಬೆಂಬಲ ನೀಡುವುದು ಬಿಡುವುದು ನಮಗೆ ಬಿಟ್ಟಿದ್ದು. ಅವರನ್ನು ಮುಂದಿಟ್ಟುಕೊಂಡು ನಾವೇನೂ ಮಾಡಬೇಕಾದ ಅನಿವಾರ್ಯತೆಯಿಲ್ಲ. ಆಕೆ ಐಟಿ ದಾಳಿ ಮಾಡಿಸುತ್ತಾರೆಂದು ಹೇಳುತ್ತಿರುವ ಜೆಡಿಎಸ್​ ನಾಯಕರಿಗೆ ಬುದ್ಧಿಯಲ್ವ ಎಂದು ಪ್ರಶ್ನಿಸಿದರು. ನಮ್ಮ ದೇಶದವರು ಮಾತ್ರವಲ್ಲದೆ, ಕೊರಿಯಾ, ಅರಬ್​ ದೇಶಗಳು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ನರೇಂದ್ರ ಮೋದಿಯವರನ್ನು ಭಾರತದ ಪ್ರಭಾವಿ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಈ ಜುಜುಬಿ ಎಚ್​.ಡಿ. ರೇವಣ್ಣ, ಕುಮಾರಸ್ವಾಮಿಯೆಲ್ಲ ನಮಗೆ ಲೆಕ್ಕಕ್ಕಿಲ್ಲ ಎಂದು ಕೆ.ಎಸ್​. ಈಶ್ವರಪ್ಪ ಟೀಕಿಸಿದ್ದಾರೆ.

Leave a Reply

Your email address will not be published. Required fields are marked *