ದಲಿತರ ಮತಗಳನ್ನು ವಿಭಜನೆ ಮಾಡಲು ಬಿಜೆಪಿ ಚಂದ್ರಶೇಖರ್ ಆಜಾದ್ ಕಣಕ್ಕಿಳಿಸಿದೆ : ಮಾಯಾವತಿ ಆರೋಪ !
ನ್ಯೂಸ್ ಕನ್ನಡ ವರದಿ : ಇತ್ತೀಚೆಗಷ್ಟೆ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಮೀರತ್ನ ಆಸ್ಪತ್ರೆಯೊಂದರಲ್ಲಿ ಭೇಟಿಯಾಗಿದ್ದರು. ಇದರಿಂದಾಗಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದಲ್ಲಿ ಸ್ಥಾನ ಪಡೆಯಲು ವಿಫಲರಾದ ಕಾಂಗ್ರೆಸ್ ಅಜಾದ್ ಅವರನ್ನು ಒಲಿಸಿಕೊಂಡು ದಲಿತರ ಬೆಂಬಲ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿರಬಹುದೆಂದು ವಿಶ್ಲೇಷಿಸಲಾಗಿತ್ತು. ಆದರೆ ಈಗ ಬಿಜೆಪಿಯವರು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ವಾರಣಾಸಿಯಿಂದ ಕಣಕ್ಕೆ ಇಳಿಸುವ ಮೂಲಕ ದಲಿತರ ಮತಗಳನ್ನು ವಿಭಜನೆ ಮಾಡಲು ಮುಂದಾಗಿದ್ದಾರೆ ಎಂದು ಬಿಎಸ್ಪಿ ಮಾಯಾವತಿ ಆರೋಪಿಸಿದ್ದಾರೆ.
ಗುರುವಾರದಂದು ಚಂದ್ರಶೇಖರ್ ಆಜಾದ್ ಅವರು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲೇ ಮಾಯಾವತಿಯವರ ಈ ಹೇಳಿಕೆ ಬಂದಿದೆ. ಈಗ ಟ್ವಿಟ್ಟರ್ ಮೂಲಕ ಕಿಡಿ ಕಾರಿರುವ ಮಾಯಾವತಿ ” ದಲಿತರ ಮತಗಳನ್ನು ವಿಭಜನೆ ಮಾಡುವ ಉದ್ದೇಶದಿಂದ ಮತ್ತು ಅದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ವಾರಣಾಸಿಯಿಂದ ಭೀಮ್ ಆರ್ಮಿಯ ಚಂದ್ರಶೇಖರ್ ಅಜಾದ್ ರನ್ನು ಕಣಕ್ಕೆ ಇಳಿಸುವ ಮೂಲಕ ಪಿತೂರಿಗೆ ಮುಂದಾಗಿದೆ. ಈ ಸಂಘಟನೆ ಬಿಜೆಪಿ ದಲಿತ ವಿರೋಧಿ ಮನಸ್ಥಿತಿ ಹಾಗೂ ಪಿತೂರಿಯಿಂದ ಸ್ಥಾಪಿತವಾಗಿದೆ. ಈಗ ಅದು ತುಚ್ಚ ರಾಜಕೀಯದಲ್ಲಿ ತೊಡಗಿದೆ” ಎಂದು ಮಾಯಾವತಿ ಕಿಡಿ ಕಾರಿದ್ದಾರೆ.