ಬಿಜೆಪಿ ಮುಕ್ತ ಕರ್ನಾಟಕ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಸಿದ್ದರಾಮಯ್ಯ !

ನ್ಯೂಸ್ ಕನ್ನಡ ವರದಿ : ಮೋದಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ನಾವು ದೇಶವನ್ನು ಒಗ್ಗೂಡಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರೆ, ಕುಮಾರಸ್ವಾಮಿ ಸರ್ಕಾರ ಜೆಡಿಎಸ್ ಕೊಟ್ಟ ಭರವಸೆ, ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತೆ ಒಟ್ಟಾಗಿ ಹೋಗಲು ತೀರ್ಮಾನಿಸಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಬಿಜೆಪಿ ಮುಕ್ತ ಕರ್ನಾಟಕ ಮಾಡಬೇಕೆಂದು ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕಾರ್ಯಕರ್ತರಿಗೆ ಕರೆ ನೀಡಿದರು. ನೆಲಮಂಗಲದಲ್ಲಿ ನಡೆದ ಮೈತ್ರಿ ಪಕ್ಷಗಳ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್​ ಅಭ್ಯರ್ಥಿ ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇರುವಲ್ಲಿ ಜೆಡಿಎಸ್​ ಕಾರ್ಯಕರ್ತರು ಸೇರಿ ಕೆಲಸ ಮಾಡಬೇಕು. ಈ ಮೂಲಕ ರಾಜ್ಯವನ್ನು ಬಿಜೆಪಿ ಮುಕ್ತ ಮಾಡಬೇಕೆಂದು ಹೇಳಿದರು.

ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗಲು ಕುಟಿಲ ಪ್ರಯತ್ನ ಮಾಡುತ್ತಿದ್ದಾರೆ. 5 ವರ್ಷದ ಅಧಿಕಾರದಲ್ಲಿ ಮೋದಿ ದೇಶವನ್ನು ಹಾಳುಮಾಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿದೆ. ನಮ್ಮ ರೈತರು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗವಿಲ್ಲದೆ ಯುವಕರು ಕೆಲಸಕ್ಕೋಸ್ಕರ ಕಾಯುವಂತಾಗಿದೆ. ಮಹಿಳೆಯರು ಅಲ್ಪಸಂಖ್ಯಾತರು, ದಲಿತರು ಆತಂಕದಲ್ಲಿ ಬದುಕುವಂತಾಗಿದೆ. ಕೋಮುವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಬೇಕಿರುವುದು ಎಲ್ಲಾ ಜಾತ್ಯತೀತ ಶಕ್ತಿಗಳ ಕರ್ತವ್ಯ. ಭಾರತೀಯ ಜನತಾ ಪಕ್ಷ ಅಧಿಕಾರದಿಂದ ಇಳಿಯಬೇಕು. ಮತ್ತೆ ಯುಪಿಎ ನೇತೃತ್ವದ ಮಿತ್ರ ಪಕ್ಷಗಳು ಅಧಿಕಾರಕ್ಕೆ ಬರಬೇಕು. ರಾಹುಲ್ ಗಾಂಧಿ ಅವರು ದೇಶದ ಚುಕ್ಕಾಣಿ ಹಿಡಿಯಬೇಕು. ಈ ಒಂದು ಸಂದೇಶ ಕರ್ನಾಟಕದಿಂದಲೇ ಇಡೀ ದೇಶಕ್ಕೆ ಹೋಗಬೇಕು. ಇದಕ್ಕಾಗಿ ಎಲ್ಲ ಭಿನ್ನಾಭಿಪ್ರಾಯವನ್ನು ಬದಿಗಿರಿಸಿ, ಬಿಜೆಪಿಯನ್ನು ಎದುರಿಸಬೇಕು. ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗ ನಮ್ಮ ಜನ ಇದರ ವಿರುದ್ಧ ಸಿಡಿದೇಳುತ್ತಾರೆ. ಸಂವಿಧಾನವನ್ನು ಉಳಿಸುತ್ತಾರೆ ಎಂಬ ವಿಶ್ವಾಸ ಹಾಗೂ ನಂಬಿಕೆ ಇದೆ ಎಂದು ಸಿದ್ಧರಾಮಯ್ಯನವರು ಹೇಳಿದರು.

Leave a Reply

Your email address will not be published. Required fields are marked *