ಈ ಚೌಕೀದಾರ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ!: ಸಿದ್ದರಾಮಯ್ಯ
ನ್ಯೂಸ್ ಕನ್ನಡ ವರದಿ: ಬೆಂಗಳೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,’ ಲೋಕಸಭೆ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಿಹಾರ ಮತ್ತು ಉತ್ತರಪ್ರದೇಶದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. ಗುಜರಾತ್ನಲ್ಲಿ 26ಕ್ಕೆ 26ರಲ್ಲೂ ಗೆದ್ದಿತ್ತು. ಆದರೆ ಈ ಬಾರಿ ಅದು ಸಾಧ್ಯವಿಲ್ಲ. ಮೋದಿಯವರು ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಜನರ ಖಾತೆಗೆ 15 ಲಕ್ಷ ರೂ.ಹಾಕುವುದು ಸೇರಿದಂತೆ ಹಲವಾರು ಭರವಸೆಗಳು ಹುಸಿಯಾಗಿವೆ.
ಯಾವುದೇ ಸರ್ಕಾರ ತಾನು ಮಾಡಿದ ಅಭಿವೃದ್ದಿ ವಿಷಯಗಳನ್ನು ಇಟ್ಟುಕೊಂಡು ಚುನಾವಣೆ ಪ್ರಚಾರ ಮಾಡಬೇಕು, ಆದರೆ ಮೋದಿಯವರು ರಾಮಮಂದಿರ, ದೇಶಭಕ್ತಿ, ಚೌಕಿದಾರ್ ಎಂಬ ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ರೈತರ ಸಾಲಮನ್ನಾವನ್ನು ಲಾಲಿಪಪ್ ಎಂದು ಜರಿಯುತ್ತಾರೆ. ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಾರೆ. ವಾಜಪೇಯಿ ಸರ್ಕಾರದಲ್ಲಿ ಇಂಡಿಯಾ ಶೈನಿಂಗ್ ಎಂದಿದ್ದರು. ತದನಂತರ ಅದು ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.