‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ತಡೆ ನೀಡಿದ ಚುನಾವಣಾ ಆಯೋಗ !

ನ್ಯೂಸ್ ಕನ್ನಡ ವರದಿ : ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ನಟನೆಯ ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರ “ಪಿಎಂ ನರೇಂದ್ರ ಮೋದಿ” ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಏ.5ರಂದು ಚಿತ್ರ ದೇಶಾದ್ಯಂತ ತೆರೆಗೆ ಬರಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಚುನಾವಣಾ ಆಯೋಗ ಸಿನಿಮಾ ಬಿಡುಗಡೆಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಈ ಏ.12ರಂದು ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಯೋಚನೆ ಚಿತ್ರತಂಡದ್ದಾಗಿತ್ತು. ಆದರೆ, ಚುನಾವಣೆ ಸಮಯದಲ್ಲಿ ಯಾವುದೇ ಬಯೋಪಿಕ್​ ರಿಲೀಸ್​ ಆಗಬಾರದು ಎಂದು ಆಯೋಗ ಹೇಳಿರುವುದರಿಂದ ಈ ಚಿತ್ರಕ್ಕೆ ಹಿನ್ನಡೆ ಆಗಿದೆ.

ಚುನಾವಣಾ ಸಮಯದಲ್ಲೇ ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ ಬಿಡುಗಡೆ ಆಗುತ್ತಿರುವುದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಚಿತ್ರ ರಿಲೀಸ್​ ಆದರೆ, ನೀತಿ ಸಂಹಿತೆ ಉಲ್ಲಂಘನೆ ಆದಂತಾಗುತ್ತದೆ ಎಂದು ವಿಪಕ್ಷಗಳು ವಾದಿಸಿದ್ದವು. ಈ ಪ್ರಕರಣ ಚುನಾವಣಾ ಆಯೋಗದ ಅಂಗಳದಲ್ಲಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್​ ಬಿಡುಗಡೆಗೆ ಚುನಾವಣಾ ಆಯೋಗ ತಡೆ ನೀಡಿದೆ. ಲೋಕಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಯಾವುದೇ ಬಯೋಪಿಕ್​ಗಳು ಬಿಡುಗಡೆ ಆಗುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದೆ. ವ್ಯಾಪಕ ವಿರೋಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಬಿಡುಗಡೆಗೆ ಒಂದು ದಿನ ಇರುವ ಮುನ್ನವಷ್ಟೇ ಆಯೋಗದಿಂದ ತಡೆ ಹಿಡಿಯಲಾಗಿದೆ.

Leave a Reply

Your email address will not be published. Required fields are marked *