ಇದೇ ತಿಂಗಳಲ್ಲಿ ಕುಮಾರಸ್ವಾಮಿ ಸಿಎಂ ಪಟ್ಟದಿಂದ ಕೆಳಗಿಳಿಯಲಿದ್ದಾರೆ: ವಿ. ಸೋಮಣ್ಣ
ಜೂನ್ ಎರಡನೇ ವಾರದಲ್ಲಿ ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಈ ತಿಂಗಳ 27 ಅಥವಾ 28ಕ್ಕೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಶಾಸಕ ವಿ. ಸೋಮಣ್ಣ ಭವಿಷ್ಯ ನುಡಿದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ 23ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ. ಅದೇನೆಂದು ಹೇಳಲಾರೆ. ನೀವೇ ಕಾದುನೋಡಿ. ಮೈತ್ರಿ ಸರ್ಕಾರ ನೀರಿನ ಮೇಲಿನ ಗುಳ್ಳೆಯಿದ್ದಂತೆ. ಅದು ಯಾವಾಗ ಬೇಕಾದರೂ ಒಡೆದುಹೋಗಬಹುದು. ಲೋಕಸಭಾ ಮತ್ತು ಸ್ಥಳೀಯ ಚುನಾವಣೆ ಬಳಿಕ ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದರು.
ಇಂದಿನಿಂದ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕುತ್ತಿದ್ದೇವೆ. ಕ್ಷೇತ್ರದಲ್ಲಿ ಪ್ರಚಾರಕ್ಕೆಂದು ನನ್ನ ಹಾಗೂ ಭಗವಂತ ಖೂಭಾ ಅವರ ನಾಯಕತ್ವದಲ್ಲಿ ಎರಡು ತಂಡಗಳನ್ನು ಸಿದ್ದ ಮಾಡಿದ್ದೇವೆ. ನಾಳೆಯಿಂದ ಕ್ಷೇತ್ರದಲ್ಲಿ ಬಿಜೆಪಿಯ ಅಬ್ಬರದ ಪ್ರಚಾರ ಆರಂಭವಾಗಲಿದೆ ಎಂದು ಶಾಸಕ ವಿ.ಸೋಮಣ್ಣ ಹೇಳಿದರು.