ದ.ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಗೆ ಜೀವಬೆದರಿಕೆ; ಬಂಧಿತರಾದ ಮೂವರು ಯಾರು ಗೊತ್ತೇ?
ನ್ಯೂಸ್ ಕನ್ನಡ ವರದಿ: ಕೆಲ ದಿನಗಳ ಹಿಂದೆ ಮುಗಿದ ಲೋಕಸಭಾ ಚುನಾವಣೆಯಲ್ದಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರೂ ಆಗಿರುವ ಮಿಥುನ್ ರೈಗೆ ಸಾರ್ವಜನಿಕವಾಗಿಯೇ ಜೀವಬೆದರಿಕೆ ಒಡ್ಡಿದ ಆರೋಪದ ಮೇಲೆ ಪೋಲೀಸರು ಇದೀಗ ಮೂವರನ್ನು ವಶಪಡಿಸಿಕೊಂಡಿದ್ದು, ಬಂಧಿತ ಮೂವರೂ ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ.
ಮಿಥುನ್ ರೈ ವಿರುದ್ಧ ಸ್ಪರ್ಧಿಸಿ ಗೆದ್ದು ಸತತ ಮೂರನೇ ಬಾರಿಗೆ ಲೋಕಸಭಾ ಸದಸ್ಯನಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಅವರ ಗೆಲುವನ್ನು ಸಂಭ್ರಮಿಸಲು ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್ನಲ್ಲಿ ಮೇ 23ರಂದು ರಾತ್ರಿ ಬಿಜೆಪಿ ಬಡಕಬೈಲ್ ಸಮಿತಿಯು ವಿಜಯೋತ್ಸವ ಹಮ್ಮಿಕೊಂಡಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಮಿಥುನ್ ರೈ ಅವರಿಗೆ ಅವಾಚ್ಯ ಶಬ್ಬಗಳಿಂದ ನಿಂದಿಸಿದಲ್ಲದೆ, ಕೊಲೆ ಬೆದರಿಕೆಯನ್ನು ಒಡ್ಡಿದ್ದರು.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಬಂಧಿತರಾದವರು ಬಂಟ್ವಾಳದ ನಿವಾಸಿಗಳಾದ ಸಚಿನ್ (25), ನಿಶಾಂತ್ (23), ಕಾಸರಗೋಡು ನಿವಾಸಿ ಕಾರ್ತಿಕ್ (30) ಎಂದು ತಿಳಿದು ಬಂದಿದೆ. ಬಜರಂಗದಳದ ತಂಟೆಗೆ ಬಂದರೆ ಕೈಕಾಲು ಕಡಿಯುವೆವು, ಅಗತ್ಯವಿದ್ದರೆ ತಲೆಯೂ ಕಡಿಯುವೆವು ಎಂದು ಸಾರ್ವಜನಿಕವಾಗಿ ಬೆದರಿಕೆಯ ಘೋಷಣೆ ಕೂಗುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.
ಇಂದು ಈ ಕುರಿತು ಖುದ್ದಾಗಿ ಪ್ರತಿಕ್ರಿಯೆ ನೀಡಿದ ಮಿಥುನ್ ರೈ, ನಾನು ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಕದಡುವ ಮತೀಯ ಶಕ್ತಿಯ ವಿರುಧ್ಧ ಧ್ವನಿ ಎತ್ತುವ ನನ್ನ ನಿಲುವಿಗೆ ಬಧ್ಧನಾಗಿರುವೆ, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ವರ್ಷದ 365ದಿನವೂ ಲಭ್ಯವಿರುವೆ, ತಲೆಕಡಿಯುವವರು ಕಚೇರಿಗೆ ಬಂದು ತಲೆಕಡಿಯಬಹುದು ಎಂದು ತಿರುಗೇಟು ನೀಡಿದ್ದರು.